ನವದೆಹಲಿ: ನವರಾತ್ರಿಯ ಕೊಡುಗೆ ಎಂಬಂತೆ ಕೇಂದ್ರ ಸರಕಾರ ಕೈಗೊಂಡ ಅತೀ ಮಹತ್ತರ ತೀರ್ಮಾನವಾದ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಸುಧಾ ರಣೆ (ಜಿಎಸ್‌ಟಿ -2.0) ದೇಶದಲ್ಲಿ ಇಂದಿನಿಂದ ವಿದ್ಯುಕ್ತವಾಗಿ ಜ್ಯಾರಿಗೆ ಬಂದಿದೆ. ಇದು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳಾಗಿದೆ. ಜಿಎಸ್‌ಟಿ ಬಚಾತ್ ಉತ್ಸವ (ಉಳಿತಾಯ ಹಬ್ಬ) ಎಂಬ ಇನ್ನೊಂದು ಹೆಸರಲ್ಲೂ ಇದನ್ನು ಜ್ಯಾರಿಗೊಳಿಸಲಾಗುತ್ತಿದೆ.
ಇದರಂತೆ ಕ್ಯಾನ್ಸರ್, ಜೆನಿಟಿಕ್ ಮತ್ತು ಅಪರೂಪದ ಖಾಯಿಲೆಗಳು ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಗೆ ಸಂಬಂಧಿಸಿದ 36ನಿರ್ಣಾಯಕ ಜೀವ ಉಳಿಸುವ ಔಷಧಿಗಳ ಮೇಲೆ ಇನ್ನು ಯಾವುದೇ ಜಿಎಸ್‌ಟಿ ಇರುವುದಿಲ್ಲ. ಮಾತ್ರವಲ್ಲ ಇತರ ಹಲವು ಔಷಧ ಸಾಮಗ್ರಿಗಳ ಜಿಎಸ್‌ಟಿ ದರವನ್ನು ಶೇ. 12ರಿಂದ ಶೇ.೫ಕ್ಕೆ ಇಳಿಸಲಾಗಿದೆ. ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗನಿರ್ಣಯ ಕಿಟ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ. ೫ಕ್ಕಿಳಿಸಲಾಗಿದೆ. ಇಲೆಕ್ಟ್ರಾನಿಕ್ಸ್, ಆಹಾರ ಮತ್ತು ಆಟೋ ಮೊಬೈಲ್ ಗಳು ಸೇರಿದಂತೆ ಹಲವಾರು ವಸ್ತುಗಳು ಹಾಗೂ ಉತ್ಪನ್ನಗಳ ಬೆಲೆ ಇಂದಿನಿಂದ ಕಡಿಮೆಯಾಗಲಿದೆ. ಸಣ್ಣ ಕಾರುಗಳ ಜಿಎಸ್‌ಟಿಯನ್ನು ಶೇ. 15ಕ್ಕೆ ಇಳಿಸ ಲಾಗಿದೆ. ಇದಲ್ಲದೆ ಹೇರ್ ಆಯಿಲ್, ಟೋಯಿಲೆಟ್ ಸೋಪ್‌ಗಳು, ಶ್ಯಾಂಪು, ಟೂತ್‌ಬ್ರೆಶ್ ಮತ್ತು ಪೇಸ್ಟ್ ಉತ್ಪನ್ನಗಳ ಜಿಎಸ್‌ಟಿನ್ನು ಶೇ. 5ಕ್ಕಿಳಿಸಲಾಗಿದೆ. ಮಾತ್ರವಲ್ಲ ಟಾಲ್ಕಂ ಪೌಡರ್, ಫೇಸ್ ಪೌಡರ್, ಶೇವಿಂಗ್ ಕ್ರೀಂ, ಆಫ್ಟರ್ ಶೇವ್ ಲೋಶನ್‌ಗಳು, ಆರೋಗ್ಯ ಕ್ಲಬ್‌ಗಳು, ಸೆಲೂನ್‌ಗಳು, ಕ್ಷೌರಿಕರು, ಫಿಟ್ನೆಸ್ ಕೇಂದ್ರಗಳು ಮತ್ತು ಯೋಗ ಕೇಂದ್ರಗಳಲ್ಲಿನ ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಶೇ. ೫ಕ್ಕಿಳಿಸಲಾಗಿದೆ. ಇದರ ಹೊರತಾಗಿ ತುಪ್ಪ, ಬೆಣ್ಣೆ, ಪನ್ನೀರ್, ನಮ್ಕೀನ್, ಕೆಚಪ್, ಜಾಮ್, ಡ್ರೈಫ್ರೂಟ್ಸ್, ಕಾಫಿ ಮತ್ತು ಐಸ್‌ಕ್ರೀಂಗಳ ಬೆಲೆಯೂ ಇನ್ನು ಇಳಿಯಲಿದೆ. ಮಾತ್ರ ವಲ್ಲ ಸಿಮೆಂಟ್‌ಮೇಲಿನ ಜಿಎಸ್‌ಟಿ ಯನ್ನು ಶೇ. ೨೮ರಿಂದ ೧೮ಕ್ಕಿಳಿಸಲಾಗಿದೆ. ಟಿವಿ, ಹವಾನಿಯಂತ್ರಿತ ಉಪಕರಣಗಳು, ವಾಶಿಂಗ್ ಮೆಷಿನ್, ಡಿಶ್ ವಾಷರ್‌ನಂತಹ ವಿದ್ಯುತ್ ಉಪಕರಣಗಳ ಬೆಲೆಯೂ ಇನ್ನು ಇಳಿಯಲಿದೆ. ಇನ್ನು ಕೆಲವು ಸರಕುಗಳ ತೆರಿಗೆಯನ್ನು ಶೇ. 40ಕ್ಕೇರಿಸಲಾಗಿದೆ. ಇದರಲ್ಲಿ ತಂಬಾಕು ಉತ್ಪನ್ನಗಳು, ಮದ್ಯ, ಪಾನ್ ಮಸಾಲೆ, ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್ ಪ್ಲಾಟ್‌ಫಾಮ್‌ಗಳು ಒಳಗೊಂಡಿವೆ. ಇಂಧನ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ, ವಜ್ರ ಮತ್ತಿತರ ಅಮೂಲ್ಯ ಕಲ್ಲುಗಳು ಸೇರಿದಂತೆ ಐಶಾರಾಮಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹೇರುವ ಸಾಧ್ಯತೆ ಇದೆ.