ಕಣ್ಣೂರು: ಪ್ರಾಯಪೂರ್ತಿಯಾ ಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮೂರು ದಶಕಗಳ ಬಳಿಕ ನ್ಯಾಯಾಲಯದಲ್ಲಿ ಶರಣಾಗಿ ದ್ದಾನೆ. ತಲಶ್ಶೇರಿ ನಿವಾಸಿ ಮುಹಮ್ಮದ್ ಶಕೀಲ್ (58) ನ್ಯಾಯಾಲಯದಲ್ಲಿ ಶರಣಾದ ಆರೋಪಿಯಾಗಿದ್ದಾನೆ.
1989 ರಲ್ಲಿ ಬಾಲಕಿಗೆ ಕಿರುಕುಳಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿ ದ್ದಾನೆ. ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸುವುದರೊಂದಿಗೆ ವಿದೇಶಕ್ಕೆ ಪರಾರಿಯಾಗಿದ್ದನು. ತಲಶ್ಶೇರಿ ಎಎಸ್‌ಪಿ ಡಾ. ನಂದಗೋಪನ್‌ರ ನಿರ್ದೇಶ ಪ್ರಕಾರ ರೂಪೀಕರಿಸಿದ ಪ್ರತ್ಯೇಕ ಸ್ಕ್ವಾಡ್ ಆರೋಪಿಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುವುದರೊಂದಿಗೆ ಈತ ಶರಣಾಗಿದ್ದಾನೆ. ಕೇಸು ದಾಖಲಿಸಿದ ಬಳಿಕ ವಿದೇಶಕ್ಕೆ ಪರಾರಿಯಾದ ಈತ ೨೮ ವರ್ಷ ಕಾಲ ಗಲ್ಫ್‌ನಲ್ಲಿ ತಲೆಮರೆಸಿಕೊಂಡಿದ್ದನು. ಪೊಲೀಸರು ನಡೆಸಿದ ತನಿಖೆ ವೇಳೆ ಪಾಸ್‌ಪೋರ್ಟ್‌ನ ಮಾಹಿತಿ ಲಭಿಸಿತ್ತು. ಇದರಿಂದ ಪೊಲೀಸರು ತನಿಖೆಯನ್ನು ವಿದೇಶಕ್ಕೆ ವಿಸ್ತರಿಸಿದ್ದು, ಬಳಿಕ ಈತನನ್ನು ಊರಿಗೆ ತಲುಪಿಸಲು ಭಾರತೀಯ ರಾಯಭಾರಿಯ ಸಹಾಯ ಯಾಚಿಸಲಾಗಿತ್ತು. ಇದರೊಂದಿಗೆ ಸೆರೆಗೀಡಾಗುವುದು ಖಚಿತವೆಂದು ತಿಳಿದ ಆರೋಪಿ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.






