ಕಾಸರಗೋಡು: ಮನೆಗೆ ನುಗ್ಗಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕನಿಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ) ಮೂರು ವರ್ಷ ಕಠಿಣ ಸಜೆ ಹಾಗೂ 3೦೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಅಡೂರು ಅತ್ತನಾಡಿ ನಿವಾಸಿ ಸುಂದರ (38) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2018 ನವಂಬರ್ 15ರಂದು ಬೆಳಿಗ್ಗೆ ಅಡೂರು ಮೈನಾಡಿಯಲ್ಲಿ ಮದ್ಯ ಕುಡಿಯಲು ನೀಡಿದ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಅದನ್ನು ನೀಡದ ದ್ವೇಷದಿಂದ ಕಣ್ಣನ್ ಎಂಬವರ ಹೊಟ್ಟೆಗೆ ಇರಿದು ಗಂಭೀರ ಗಾಯಗೊಳಿಸಿದ ದೂರಿನಂತೆ ಸುಂದರನ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಅಂದು ಆದೂರು ಪೊಲೀಸ್ ಠಾಣೆಯ ಎಸ್‌ಐ ಎಂ. ರಾಜನ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಪಿ. ಸತೀಶನ್ ಮತ್ತು ನ್ಯಾಯವಾದಿ ಅಂಬಿಳಿ ನ್ಯಾಯಾಲಯದಲ್ಲಿ ವಾದಿಸಿದ್ದರು.







