ಕಾಸರಗೋಡು ರೈಲ್ವೇ ಪಾರ್ಸೆಲ್ ಕಚೇರಿ ಮುಂದುವರಿಕೆ: ಅಧಿಕಾರಿಗಳ ಭರವಸೆ

ಕಾಸರಗೋಡು: ಕಾಸರಗೋಡು ರೈಲ್ವೇ ಪಾರ್ಸೆಲ್ ಕಚೇರಿ ಇದೀಗಿನ ರೀತಿಯಲ್ಲೇ ಮುಂದುವರಿಯಲಿದೆಯೆಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.  ರೈಲ್ವೇ ಡಿವಿಶನ್ ಮೆನೇಜರ್ ಮಧುಕರ ರೌತ್, ಎಡಿಆರ್‌ಎಂ ಮುಹಮ್ಮದ್ ಇಸ್ಲಾಂ, ಸೀನಿಯರ್ ಡಿವಿಶನ್ ಕಮರ್ಶಿಯಲ್ ಮೆನೇಜರ್ ಬಾಲಮುರುಗನ್, ಮಿಥುನ್, ಶೈಲೇಶ್ ಕುಮಾರ್ ಎಂಬಿವರು ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ  ಪ್ಯಾಸೆಂಜರ್ಸ್ ಅಸೋಸಿಯೇಶನ್  ವಿವಿಧ ಬೇಡಿಕೆ  ಮುಂದುವರಿಸಿ ಮನವಿ ಸಲ್ಲಿಸಿದ್ದು,   ಮನವಿಯನ್ನು ಸ್ವೀಕರಿಸಿದ ಅಧಿಕಾರಗಳು ಪಾರ್ಸೆಲ್ ಕಚೇರಿ ಮುಂದುವರಿಸುವ  ಬಗ್ಗೆ ಭರವಸೆ ನೀಡಿದ್ದಾರೆ.

ಸಂಜೆ ಹೊತ್ತಿನಲ್ಲಿ ಕಲ್ಲಿಕೋಟೆಯಿಂದ ಕಣ್ಣೂರುವರೆಗೆ ತೆರಳುವ ಪಾಲಕ್ಕಾಡ್-ಕಣ್ಣೂರು, ಕೊಯಂಬತ್ತೂರು-ಕಣ್ಣೂರು ಪ್ಯಾಸೆಂಜರ್ ರೈಲುಗಳನ್ನು ಕಾಸರಗೋಡು ಅಥವಾ ಮಂಜೇಶ್ವರ ವರೆಗೆ ಮುಂದುವರಿಸಬೇಕೆಂದು ಪ್ಯಾಸೆಂಜರ್ಸ್ ಅಸೋಸಿಯೇಶನ್ ಮನವಿಯಲ್ಲಿ ಆಗ್ರಹಪಟ್ಟಿದೆ. ಬೆಳಿಗ್ಗೆ ಕಣ್ಣೂರಿನಿಂದ ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಹಾಗೂ ಕಣ್ಣೂರು ಎಕ್ಸ್‌ಪ್ರೆಸ್‌ನಲ್ಲಿ ಸೀಸನ್ ಟಿಕೆಟ್ ಪ್ರಯಾಣಿಕರು ಎದುರಿಸುವ ಸಮಸ್ಯೆಗಳನ್ನು ಮನವಿಯಲ್ಲಿ ವಿವರಿಸಲಾಗಿದೆ. ಒಂದು ಮೆಮೂ ರೈಲುಗಾಡಿಯನ್ನು ಕೂಡಾ ಆರಂಭಿಸಬೇಕೆಂದೂ ಅದು ಮರಳಿ ಮಂಗಳೂರಿನಿಂದ ಇಂಟರ್‌ಸಿಟಿಯ ಹಿಂದೆ ಸಂಚಾರ ನಡೆಸಿದರೆ ಕಣ್ಣೂರಿನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಕಣ್ಣೂರಿಗೆ  ಹಲವು ರೈಲುಗಳಿಗೆ ಸಂಪರ್ಕ ರೈಲಾಗಿ ಪ್ರಯೋಜನವಾಗಲಿದೆಯೆಂದು ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ. ಸಂಜೆ ಹೊತ್ತಿನಲ್ಲಿ ಚೆನ್ನೈ ಸೂಪರ್ ಫಾಸ್ಟ್‌ನಲ್ಲಿ ಕಣ್ಣೂರು ವರೆಗೆ ಸೀಸನ್ ಟಿಕೆಟ್ ಪಡೆದವರನ್ನು ರಿಸರ್ವೇಶನ್ ಕಂಪಾರ್ಟ್‌ಮೆಂ ಟ್‌ನಲ್ಲಿ ಪ್ರಯಾಣಿಸಲು ಅನುಮತಿ ನೀಡಬೇಕೆಂದೂ ವಿನಂತಿಸಲಾಗಿದೆ. ಅಂತ್ಯೋದಯ ಎಕ್ಸ್‌ಪ್ರೆಸ್‌ಗೆ ಕಾಞಂಗಾಡ್, ನೀಲೇಶ್ವರ, ಪಯ್ಯನ್ನೂರಿನಲ್ಲಿ ನಿಲುಗಡೆ ಮಂಜೂರು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಮನವಿ ಸಲ್ಲಿಸಿದ ನಿಯೋಗದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಆರ್. ಪ್ರಶಾಂತ್ ಕುಮಾರ್, ಟಿ.ಇ.ಅನ್ವರ್ ಮೊದಲಾದವರಿದ್ದರು.

RELATED NEWS

You cannot copy contents of this page