18ರ ಕೆಳಗಿನ ಪ್ರಾಯದವರ ಮಧ್ಯರಾತ್ರಿಯ ಚಹಾ ಸೇವನೆ: ಹೆತ್ತವರು ಜಾಗ್ರತೆ ಪಾಲಿಸಬೇಕೆಂದು ಪೊಲೀಸ್

ಕುಂಬಳೆ: ಮಧ್ಯರಾತ್ರಿ ಬಳಿಕದ ಗೂಡಂಗಡಿಗಳ ಚಟುವಟಿಕೆ ಹಾಗೂ ಆ ಸಮಯದಲ್ಲಿ ಯುವಕರ ಚಹಾ ಸೇವಿಸುವ ಹವ್ಯಾಸದ ಬಗ್ಗೆ ಕುಂಬಳೆ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ. ಇತ್ತೀಚೆಗೆ ಆರು ಬೈಕ್‌ಗಳಲ್ಲಾಗಿ 10ರಷ್ಟು ಯುವಕರು ಮಂಗಳೂರಿನಿಂದ ಚಹಾ ಸೇವಿಸಲೆಂದು ಗೂಡಂಗಡಿ ಹುಡುಕಾಡಿ ತಲುಪಿರುವುದನ್ನು ತನಿಖೆಗೊಳಪಡಿಸಲಾಗುತ್ತಿದೆ. ಚೇವಾರಿನಲ್ಲಿ ಇತ್ತೀಚೆಗೆ ಗೂಡಂಗಡಿಯೊಂದರಲ್ಲಿ ಯುವಕರು ಮಧ್ಯರಾತ್ರಿ ವೇಳೆ ಬೊಬ್ಬೆ ಹೊಡೆದು ನಡೆಸಿದ ಸಾಮೂಹಿಕ ಹೊಡೆದಾಟದ ಮಧ್ಯೆ ಪೊಲೀಸ್ ಪಟ್ರೋಲಿಂಗ್ ತಂಡ ಜೀಪು ನಿಲ್ಲಿಸಿ ಸ್ಥಳಕ್ಕೆ ತಲುಪಿದ ಘಟನೆಯ ಹಿಂದೆ ಮಾದಕ ಪದಾರ್ಥ- ಹೊಯ್ಗೆ ಸಾಗಾಟ- ಮದ್ಯ ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿತ್ತೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಗೂಡಂಗಡಿಯಿಂದ ಹಿಂತಿರುಗದ ಯುವಕರನ್ನು ಪೊಲೀಸರು ಹೊಡೆದೋಡಿಸಿದರೂ ಅದರಿಂದಲೂ ತೆರಳದ ಮೂರು ಮಂದಿಯನ್ನು ಬಂಧಿಸಲಾಗಿತ್ತು. ಘಟನೆಯಲ್ಲಿ ಮದ್ಯ- ಮಾದಕ- ಹೊಯ್ಗೆ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಮಧ್ಯರಾತ್ರಿಯ ಬಳಿಕವಿರುವ ಗೂಡಂಗಡಿಯ ಚಟುವಟಿಕೆಯನ್ನು ಹಾಗೂ ಗೂಡಂಗಡಿಗಳ ಚಹಾ ವ್ಯಾಪಾರವನ್ನು ಕೊನೆಗೊಳಿಸಬೇಕೆಂದು ಡಿವೈಎಫ್‌ಐ ಮುಖಂಡ ಬಿ.ಎ. ಬಶೀರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಆಗ್ರಹಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಕಾರ್ಯಾಚರಿಸುವ ಗೂಡಂಗಡಿಗಳ ವಿರುದ್ಧ ಕ್ರಮ ಆಗ್ರಹಿಸಿ ಡಿವೈಎಫ್‌ಐ ಹಾಗೂ ಸಿಪಿಎಂ ಚೇವಾರಿನಲ್ಲಿ ಮೆರವಣಿಗೆ ನಡೆಸಿತ್ತು. ರಾತ್ರಿ ಬಿಸಿಯಾದ, ಶುದ್ಧವಾದ ಸಾದ ಆಹಾರ ಸೇವಿಸಲೆಂದು ಮಂಗಳೂರಿನಿಂದ 10 ಯುವಕರು ಇತ್ತೀಚೆಗೆ ತಲಪಾಡಿಗೆ ತಲುಪಿದ್ದರೆಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ 11 ಗಂಟೆ ಕಳೆದ ಬಳಿಕ ಗೂಡಂಗಡಿಗಳ ಕಾರ್ಯಾಚರಣೆಯನ್ನು ಕಾನೂನುಪರವಾಗಿ ತಡೆ ಹಿಡಿದಿರುವುದರಿಂದಾಗಿ ಇವರು ಗೂಡಂಗಡಿಗಳನ್ನು ಹುಡುಕಾಡಿ ಆರು ಬೈಕ್‌ಗಳಲ್ಲಿ ಕಾಸರಗೋಡು ಭಾಗಕ್ಕೆ ತಲುಪಿರುವುದಾಗಿ ಹೇಳಲಾಗುತ್ತಿದೆ. ಬಂದ್ಯೋಡುನಲ್ಲಿ ಗೂಡಂಗಡಿ ತೆರೆದಿತ್ತೆಂದು ಹೇಳಲಾಗುತ್ತಿದೆ. ಈ ಪ್ರಯಾಣದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಮಗುಚಿ ಓರ್ವ ಯುವಕ ಮೃತಪಟ್ಟಿರುವುದೆಂದು ಹೇಳಲಾಗಿತ್ತು. ಗಾಯಗೊಂಡ ಇನ್ನೋರ್ವ ಆಸ್ಪತ್ರೆಯಲ್ಲಿದ್ದಾನೆ. ಚೇವಾರಿನ ಮಧ್ಯರಾತ್ರಿಯ ಚಹಾ ವ್ಯಾಪಾರಕ್ಕೆ ಸಂಬಂಧಿಸಿ ಪೊಲೀಸರು ಕೈಗೊಂಡ ಕ್ರಮದ ವಿರುದ್ಧ ರೋಷಗೊಂಡ ಯೂಟ್ಯೂಬ್ ಚ್ಯಾನೆಲ್‌ಗಳ ಬಗ್ಗೆಯೂ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಾರೆ. ಕುಂಬಳೆ ಎಸ್‌ಐ ಅಬ್ದುಸಲಾಂ ಈ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ 18 ವರ್ಷಕ್ಕಿಂತ ಕೆಳಗಿನ ಪ್ರಾಯದವರ ಮಧ್ಯರಾತ್ರಿಯ ಚಹಾ ಸೇವನೆಯ ಬಗ್ಗೆ ಹೆತ್ತವರು ಜಾಗ್ರತೆ ಪಾಲಿಸಬೇಕೆಂದು ಪೊಲೀಸರು ವಿನಂತಿಸಿದ್ದಾರೆ.

RELATED NEWS

You cannot copy contents of this page