ತಿರುವನಂತಪುರ: ರಾಜ್ಯ ಸರಕಾರ ಆರಂಭಿಸಿದ ನವಕೇರಳ ಸರ್ವೇಯನ್ನು ಕೇರಳ ಹೈಕೋರ್ಟ್ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಸರ್ವೇಗಾಗಿ ಈತನಕ ವ್ಯಯಿಸಲಾಗಿರುವ 20 ಕೋಟಿ ರೂ.ವನ್ನು ಸರಕಾರವೇ ರಾಜ್ಯ ಖಜಾನೆಗೆ ಮರುಪಾವತಿಸಬೇಕಾಗಿ ಬರಲಿದೆ.
ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ನವಕೇರಳ ಸರ್ವೇ ಆರಂಭಿಸಲಾಗಿದೆ ಎಂಬುವುದನ್ನು ಎತ್ತಿ ತೋರಿಸಿ ಮುಖ್ಯ ನ್ಯಾಯಮೂರ್ತಿ ಗಳಾದ ಸೌಮನ್ ಸೇನ್ ಮತ್ತು ಶ್ಯಾಮ್ ಕುಮಾರ್‌ರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ನವಕೇರಳ ಸರ್ವೇಯನ್ನು ರದ್ದುಪಡಿಸಿ ನಿನ್ನೆ ತೀರ್ಪು ನೀಡಿತ್ತು. ಈ ತೀರ್ಪು ಸರಕಾರಕ್ಕೆ ಚುನಾವಣೆ ಸಂದರ್ಭದಲ್ಲಿ ತೀವ್ರ ತಿರುಗೇಟು ನೀಡಿದಂತಾಗಿದೆ. ಅಭಿವೃದ್ದಿ ಮತ್ತು ರಾಜ್ಯ ಸರಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಸಾರ್ವಜನಿಕ ಜನಾಭಿಪ್ರಾಯ ಹಾಗೂ ಸಲಹೆಗಳನ್ನು ಕ್ರೋಢೀ ಕರಿಸುವ ಹೆಸರಲ್ಲಿ ನವಕೇರಳ ಸಿಟಿಜನ್ಸ್ ರೆಸ್ಪೋನ್ಸ್ ಪ್ರೋಗ್ರಾಂ ಎಂಬ ಹೆಸರಲ್ಲಿ ಈ ಸರ್ವೇ ಆರಂಭಿಸಲಾಗಿತ್ತು. ಈ ಬಗ್ಗೆ 2025 ಅಕ್ಟೋಬರ್ 10ರಂದು ರಾಜ್ಯ ಸರಕಾರ ಅಧಿಸೂಚನೆ ಜ್ಯಾರಿಗೊಳಿ ಸಿತ್ತು. ಇದನ್ನು ಹಾಗೂ ಇದಕ್ಕಾಗಿ ಸರಕಾರಿ ಹಣವನ್ನು ವಿನಿಯೋಗಿಸುವ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ.
ಸರಕಾರದ ವೆಚ್ಚದಲ್ಲಿ ಇಂತಹ ಸರ್ವೇ ನಡೆಸುವುದಾದಲ್ಲಿ ಅದಕ್ಕೆ ಹಣಕಾಸು ಇಲಾಖೆಯ ಮುಂಗಡ ಅನುಮತಿ ಅಗತ್ಯವಿದೆ. ಅಂತಹ ಕ್ರಮವನ್ನು ಪಾಲಿಸಲಿಲ್ಲವೆಂದೂ ನ್ಯಾಯಾಲಯ ಹೇಳಿದೆ. ಈ ತಿಂಗಳ 22ರ ತನಕ ಮುಂದುವರಿಯ ಬೇಕಾಗಿದ್ದ ಈ ಸರ್ವೇ ಹೈಕೋರ್ಟ್‌ನ ತೀರ್ಪಿನಿಂದಾಗಿ ಈಗ ರದ್ದುಗೊಂಡಂತಾಗಿದೆ. ಇದರಿಂದಾಗಿ ಸರ್ವೇಗಾಗಿ ಈತನಕ ವ್ಯಯಿಸಿದ್ದ 20 ಕೋಟಿ ರೂ.ವನ್ನು ಸರಕಾರವೇ ರಾಜ್ಯ ಖಜಾನೆಗೆ ಮರುಪಾವತಿಸ ಬೇಕಾಗಿ ಬರಲಿದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ನೀತಿ ಸಂಹಿತೆ ಜ್ಯಾರಿಯಲ್ಲಿರುವ ವೇಳೆಯಲ್ಲೇ ಈ ಸರ್ವೇಗಾಗಿರುವ ಕ್ರಮಗಳನ್ನು ಸರಕಾರ ಆರಂಭಿಸಿತ್ತು. ಇದರಂತೆ ಜನವರಿ 1ರಿಂದ ಸರ್ವೇ ಆರಂಭಿಸಲಾಗಿದ್ದು, ಇದನ್ನು ಫೆ.28ರ ತನಕ ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ವಿಧಾನಸಭಾ ಚುನಾವಣೆಯ ವಿಜ್ಞಾಪನೆ ಹೊರಬರುವ ಮೊದಲೇ ಈ ಸರ್ವೇಯನ್ನು ಪೂರ್ತೀಕರಿಸುವ ಉದ್ದೇಶವನ್ನು ಸರಕಾರ ಹಾಕಿಕೊಂಡಿತ್ತು.






