ನವದೆಹಲಿ: ಭಯೋತ್ಪಾದಕ ದಾಳಿಗೆ ಸಂಚು ಹೂಡಿರುವುದಕ್ಕೆ ಸಂಬಂಧಿಸಿ ದೇಶದ 5 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಬೆಳಿಗ್ಗೆ ಏಕ ಕಾಲದಲ್ಲಿ ದಾಳಿ ಮತ್ತು ತಪಾಸಣೆ ಆರಂಭಿಸಿದೆ. ಹೀಗೆ ಈ ಐದು ರಾಜ್ಯಗಳ 28 ಕೇಂದ್ರಗಳಲ್ಲಾಗಿ ಈ ದಾಳಿ ಆರಂಭಿಸಲಾಗಿದೆ. ಇದರಂತೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಕುಲ್ಗಾಮ್ ಅನಂತ್‌ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲೂ ಈ ದಾಳಿ ನಡೆಸಲಾಗುತ್ತಿದೆ.
ಭಯೋತ್ಪಾದನೆಗೆ ಸಂಚು ಮಾತ್ರವಲ್ಲ ಅದಕ್ಕೆ ಪಿತೂರಿ ನೀಡಿದ ಪ್ರಕರಣಗಳಿಗೂ ಸಂಬಂಧಿಸಿ ಈ ದಾಳಿ ನಡೆಸಲಾಗುತ್ತಿದೆ. ಭಾರತದಲ್ಲಿ ಭಯೋತ್ಪಾದನೆ ನಡೆಸಲು ಪಾಕಿಸ್ತಾನದಿಂದ ಆರ್ಥಿಕ ಹಾಗೂ ಇನ್ನಿತರ ಅಗತ್ಯದ ಸಹಾಯಗಳು ಪಾಕ್ ಪ್ರಾಯೋಜಿತ ಭಯೋತ್ಪಾದಕರಿಗೆ ಲಭಿಸಿದ ಬಗ್ಗೆ ಎನ್‌ಐಎಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಆ ಬಗ್ಗೆ ಸಮಗ್ರ ತನಿಖೆ ನಡೆಸಿ ಅದರ ಹಿಂದಿನ ಷಡ್ಯಂತ್ರಗಳನ್ನು ಬಯಲಿಗೆಳೆಯುವುದೇ ಎನ್‌ಐಎ ಆರಂಭಿಸಿರುವ ದಾಳಿಯ ಪ್ರಧಾನ ಉದ್ದೇಶವಾಗಿದೆ. ಆದರೆ ಇಂದು ಆರಂಭಿಸಲಾಗಿರುವ ದಾಳಿ ಮತ್ತು ಪರಿಶೀಲನೆ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಎನ್‌ಐಎ ಇನ್ನೂ ಬಹಿರಂಗಪಡಿಸಿಲ್ಲ.