ನವದೆಹಲಿ: ಒಂದಕ್ಕಿಂತ ಹೆಚ್ಚು ಮತದಾರ ಯಾದಿಯಲ್ಲಿ ಹೆಸರು ಹೊಂದಿದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲವೆಂದು ಸ್ಪಷ್ಟಪಡಿಸಿ ಸುಪ್ರೀಂಕೋರ್ಟ್ ಮಹತ್ತರ ತೀರ್ಪು ನೀಡಿದೆ.
ಒಂದಕ್ಕಿಂತ ಹೆಚ್ಚು ಮತದಾರ ಯಾದಿಯಲ್ಲಿ ಹೆಸರು ಹೊಂದಿರುವವರಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ತರಾಖಂಡ ಚುನಾವಣಾ ಆಯೋಗ ಅನುಮತಿ ನೀಡಿ ಅಧಿಸೂಚನೆ ಜ್ಯಾರಿಗೊಳಿಸಿತ್ತು. ಅದನ್ನು ಬಳಿಕ ಉತ್ತರಾಖಂಡ ಹೈಕೋರ್ಟ್ ರದ್ದುಪಡಿಸಿತ್ತು. ಆ ತೀರ್ಪಿನ ವಿರುದ್ಧ ಉತ್ತರಾಖಂಡ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ ಮೇಲ್ಮನವಿ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಂನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾರನ್ನೊಳಗೊಂಡ ಸುಪ್ರೀಂಕೋರ್ಟ್ನ ವಿಭಾಗೀಯ ಪೀಠ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದು ಅದಕ್ಕೆ ಪೂರಕವಾಗಿ ಈ ಮಹತ್ತರ ತೀರ್ಪು ನೀಡಿದೆ. ಉತ್ತರಾಖಂಡ ರಾಜ್ಯ ಚುನಾವಣಾ ಆಯೋಗ ಹೊರಡಿಸಿದ ಅಧಿಸೂಚನೆಯನ್ನು ಜ್ಯಾರಿಗೊಳಿಸದಂತೆಯೂ ಸುಪ್ರೀಂಕೋರ್ಟ್ ನಿರ್ದೇಶ ನೀಡಿದೆ ಮಾತ್ರವಲ್ಲದೆ ಉತ್ತರಾಖಂಡ ಚುನಾವಣಾ ಆಯೋಗಕ್ಕೆ 2 ಲಕ್ಷ ರೂ. ಜುಲ್ಮಾನೆ ವಿಧಿಸಿದೆ.