ಕಾಸರಗೋಡು: ಜಿಲ್ಲೆಯಲ್ಲಿ ನೂತನ ಮೂರು ಖಾಸಗಿ ಕೈಗಾರಿಕಾ ಪಾರ್ಕ್ಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಇದರೊಂದಿಗೆ ಈ ಮೊದಲು ಅನುಮತಿ ಲಭಿಸಿದ ಪಾರ್ಕ್ಗಳು ಸಹಿತ ಜಿಲ್ಲೆಯಲ್ಲಿ ಖಾಸಗಿ ಕೈಗಾರಿಕಾ ಪಾರ್ಕ್ಗಳ ಸಂಖ್ಯೆ ಆರು ಆಗಿ ಹೆಚ್ಚಳಗೊಂಡಿದೆ. ಕೈಗಾರಿಕಾ ಅಗತ್ಯಗಳಿಗೆ ಹೆಚ್ಚು ಭೂಮಿ ಲಭ್ಯಗೊಳಿಸುವುದಕ್ಕಾಗಿ ರಾಜ್ಯ ಸರಕಾರ ಆವಿಷ್ಕರಿಸಿದ ಯೋಜನೆಯಾಗಿದೆ ಖಾಸಗಿ ಕೈಗಾರಿಕಾ ಪಾರ್ಕ್ ಯೋಜನೆ. ಕನಿಷ್ಠ 10 ಎಕ್ರೆ ಭೂಮಿ ಸ್ವಂತವಾಗಿ ಇರುವ ಖಾಸಗಿ ವ್ಯಕ್ತಿಗಳಿಗೆ, ಗ್ರೂಪ್ಗಳಿಗೆ, ಕಂಪೆನಿಗಳಿಗೆ ಕೈಗಾರಿಕಾ ಪಾರ್ಕ್ ಸ್ಥಾಪಿಸುವುದಕ್ಕೆ 3 ಕೋಟಿ ರೂ.ವರೆಗೆ ಸರಕಾರ ಗ್ರಾಂಟ್ ಲಭ್ಯಗೊಳಿಸುವುದು. ಅಲ್ಲದೆ ಈ ರೀತಿಯಲ್ಲಿ ಸ್ಥಾಪಿಸುವ ಖಾಸಗಿ ಕೈಗಾರಿಕಾ ಪಾರ್ಕ್ಗಳಿಗೆ ಸರಕಾರಿ ಕೈಗಾರಿಕಾ ಪಾರ್ಕ್ಗಳಿಗಿರುವ ಕಾನೂನು ಪರವಾದ ಸಂರಕ್ಷಣೆ ಲಭಿಸುವುದು.
ಜಿಲ್ಲೆಯಲ್ಲಿ ಈ ಮೊದಲು ಅನುಮತಿ ಲಭಿಸಿದ ಪೈವಳಿಕೆಯ ಫಿಯೋ ಎನರ್ಜಿ ಗ್ರೂಪ್, ಮಾನ್ಯದ ಮುಂಡೋಳ್ ಗ್ರೂಪ್ ಮುನ್ನಾಡಿನ ಪೀಪಲ್ಸ್ ಕಾಲೇಜ್ ಎಂಬಿವುಗಳ ಹೊರತಾಗಿ ಹೊಸತಾಗಿ ಪೊಯಿನಾಚಿ ಕಲ್ಲಳಿಯಲ್ಲಿರುವ ಫುಡ್ ಪಾರ್ಕ್, ಪೆರಿಯದ ಫರ್ನೀಚರ್ ಪಾರ್ಕ್, ಮಂಜೇಶ್ವರ ಆನೆಕಲ್ಲ್ನ ಕೈಗಾರಿಕಾ ಪಾರ್ಕ್ ಎಂಬಿವುಗಳಿಗೆ ಈಗ ಅನುಮತಿ ಲಭಿಸಿದೆ. ಇದರಿಂದಾಗಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚು ಪ್ರಚೋದನೆ ಲಭಿಸುವುದೆಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜನರಲ್ ಮೆನೇಜರ್ ಕೆ. ಸುಜಿತ್ ಕುಮಾರ್ ತಿಳಿಸಿದ್ದಾರೆ.







