ಕುಂಬಳೆ: ಹೊಯ್ಗೆ ಸಾಗಾಟ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಮುನ್ನಚ್ಚರಿಕೆ ನೀಡಿದ್ದಾರೆ. ಇದರಂತೆ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವವರನ್ನು ಸೆರೆಹಿಡಿದು ಅವರ ವಿರುದ್ಧ ಕಳವು ಹಾಗೂ ಕಾಪಾ ಪ್ರಕರಣ ದಾಖಲಿಸಿ ಗಡಿಪಾರು ನಡೆಸಲಾಗುವುದು. ಗಡಿಪಾರು ಉಲ್ಲಂಘಿಸಿದಲ್ಲಿ ಎರಡು ವರ್ಷ ವರೆಗೆ ಜೈಲು ಶಿಕ್ಷೆ ಲಭಿಸಬಹುದಾದ ಆರೋಪ ಹೊರಿಸಿ ಕೇಸು ದಾಖಲಿಸಲಾಗುವುದೆಂದು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಬೈಜು ಕೆ ಥೋಮಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ತಿಳಿಸಿದ್ದಾರೆ.
ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಿಸುವ ದಂಧೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವಉದ್ದೇಶದಿಂದ ಪೊಲೀಸರು ಇದೀಗ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾಚಾಣಿ, ತಲ್ಪಾರ, ಉಳುವಾರು, ವಳಯಂ, ಇಚ್ಲಂಗೋಡು ಮೊದಲಾದ ಹೊಳೆಗಳಿಂದ ಹೊಯ್ಗೆ ಸಾಗಾಟ ವ್ಯಾಪಕಗೊಂಡಿರುವುದಾಗಿ ಮಾಹಿತಿ ಲಭಿಸಿದೆ. ಈಗಾಗಲೇ ಈ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ ಹಲವು ದೋಣಿಗಳನ್ನು ಪೊಲೀಸರು ನಾಶಗೊಳಿಸಿದ್ದಾರೆ. ಆದರೆ ಪೊಲೀಸರ ಕಾರ್ಯಾಚರಣೆ ವೇಳೆ ಹೊಯ್ಗೆ ಸಂಗ್ರಹ ಗಾರರು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿರುವುದು ತೀವ್ರ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹೊಳೆಗೆ ರಸ್ತೆ ಸೌಕರ್ಯ ಸಹಿತ ಹೊಯ್ಗೆ ಸಾಗಾಟಕ್ಕೆ ಸಹಾಯ ಒದಗಿಸುವವರ ವಿರುದ್ಧವೂ ಕಳವು ಪ್ರಕರಣ ದಾಖಲಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಈ ಮೊದಲೇ ನಿರ್ಧರಿಸಿದ್ದಾರೆ.







