ಮಂಜೇಶ್ವರ: ಮಲಕರಿಂದ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡು ಬಳಿಕ ಅದನ್ನು ಇತರರಿಗೆ ಹಸ್ತಾಂತರಿಸುವ ತಂಡದ ರೂವಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಉಳಿಯತ್ತಡ್ಕ ಎಸ್.ಪಿ ನಗರದ ನಿವಾಸಿ ಅಬ್ದುಲ್ ಅಶ್ಫಾಕ್ (31) ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ ರೆಡ್ಡಿಯವರ ನಿರ್ದೇಶ ಪ್ರಕಾರ ಅವರ ನೇತೃತ್ವದ ವಿಶೇಷ ಪೊಲೀಸರ ತಂಡದ ಸಹಾಯದೊಂದಿಗೆ ಎಎಸ್ಪಿ ಡಾ. ಎಂ. ನಂದ ಗೋಪಾಪನ್ರ ನೇತೃತ್ವದಲ್ಲಿ ಮಂಜೇಶ್ವರ, ವಿದ್ಯಾನಗರ, ಕುಂಬಳೆ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳು ಹಾಗೂ ಕಾಸರಗೋಡು ಸಬ್ ಡಿವಿಷನ್ನ ಪೊಲೀಸ್ ಸ್ಕ್ವಾಡ್ ಒಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.
ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡು ಹೊರ ರಾಜ್ಯಗಳಿಗೆ ಸಾಗಿಸಿ ಅದನ್ನು ಇತರರಿಗೆ ಹಸ್ತಾಂತರಿಸುವ ಹಾಗೂ ಅದರ ಅಸಲಿ ಮಾಲಕರಿಗೆ ಬೆದರಿಕೆ ಒಡ್ಡುವ ತಂಡದ ರೂವಾರಿಯಾಗಿದ್ದಾನೆ ಬಂಧಿತನೆಂದೂ, ಈ ತಂಡದಲ್ಲಿ ಇನ್ನೂ ಹಲವರು ಶಾಮೀಲಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಬಳಿಕ ಅದನ್ನು ಇತರರಿಗೆ ಹಸ್ತಾಂತರಿಸಿದ ಕೇಸೊಂದು ಹೊಸದಾಗಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡಿದೆ. ಮಾತ್ರವಲ್ಲ ಇದೇ ರೀತಿ ಇನ್ನೊಂದು ದೂರು ಕುಂಬಳೆ ಪೊಲೀಸರಿಗೂ ನಿನ್ನೆ ಲಭಿಸಿದೆ ಎಂದೂ ಆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಅಬ್ದುಲ್ ಅಶ್ಫಾಕ್ನ ವಿರುದ್ಧ ಕಾಸರಗೋಡು, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಾಗಿ ಹಲವು ಕೇಸುಗಳಿವೆ. ಬಂಧಿತನನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಕಾಸರಗೋಡು ಸ್ಪೆಷಲ್ ಸಬ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಮಾತ್ರವಲ್ಲ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ಪಡೆದುಕೊಳ್ಳಲಾಗುವುದೆಂದೂ ಪೊಲೀಸರು ತಿಳಿಸಿದ್ದಾರೆ.