ಶಬರಿಮಲೆ: ಶಬರಿಮಲೆ ದೇಗುಲದ ಚಿನ್ನ ಕಳವು ನಡೆದ ಬೆನ್ನಲ್ಲೇ ದೇಗುಲಕ್ಕೆ ಪೂರೈಸಲಾಗಿರುವ ತುಪ್ಪವನ್ನು ಗುಪ್ತವಾಗಿ ಮಾರಾಟ ಮಾಡಿ ಅದರ ಬದಲು ಕಳಪೆ ಗುಣಮಟ್ಟದ ತುಪ್ಪವನ್ನು ಸನ್ನಿಧಾನಕ್ಕೆ ತಲುಪಿಸಲಾಗಿದೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಆಬಗ್ಗೆ ಸಮಗ್ರ ತನಿಖೆಗೆ ಆರೋಗ್ಯ, ಮುಜರಾಯಿ ಖಾತೆಗೆ ಕೆ.ಮುರಳೀಧರನ್ ನಿರ್ದೇಶ ನೀಡಿದ್ದಾರೆ. ಮುಜರಾಯಿ ಇಲಾಖೆಯ ಕಾರ್ಯದರ್ಶಿಗೆ ತನಿಖೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ.
ಶಬರಿಮಲೆಗೆ ಅಗತ್ಯವಿರುವ ತುಪ್ಪವನ್ನು ಮಿಲ್ಮಾದಿಂದ ಪೂರೈಸಲಾಗುತ್ತಿದೆ. ಆದರೆ ಆ ತುಪ್ಪವನ್ನು ಗುಪ್ತವಾಗಿ ಮಾರಾಟಮಾಡಿ ಕಳಪೆ ಗುಣಮಟ್ಟದ ತುಪ್ಪವನ್ನು ಖರೀದಿಸಲಾಗಿತ್ತೆಂದೂ, ತುಪ್ಪ ಖರೀದಿಗಾಗಿರುವ ಟೆಂಡರ್ ಕ್ರಮದಲ್ಲಿ ಭಾರೀ ಅವ್ಯವಹಾರ ನಡೆದಿದೆ. ಮಾತ್ರವಲ್ಲ ಅದರ ಬ್ಯಾಚ್ ನಂಬ್ರಗಳಲ್ಲೂ ತಿದ್ದುಪಡಿ ತರಲಾಗಿದೆಯೆಂಬ ಆರೋಪ ಉಂಟಾಗಿದ್ದು ಆ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಕೂಡಾ ಇನ್ನೊಂದೆಡೆ ತನಿಖೆ ಆರಂಭಿಸಿದೆ.
ಇಂತಹ ಅವ್ಯವಹಾರ ಜನರ ಧಾರ್ಮಿಕ ನಂಬುಗೆಯ ಮೇಲೆ ತೀವ್ರ ಪರಿಣಾಮ ಬೀರುವಂತೆ ಮಾಡಲಿದೆ. ಆದ್ದರಿಂದ ಈ ಅವ್ಯವಹಾರಗಳ ಬಗ್ಗೆ ತಿರುವಿದಾಂಕೂರು ಮುಜರಾಯಿ ಮಂಡಳಿ ತುರ್ತಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆಯೂ ಮುಜರಾಯಿ ಖಾತೆ ಸಚಿವರು ನಿರ್ದೇಶ ನೀಡಿದ್ದಾರೆ. ಮುಜರಾಯಿ ಮಂಡಳಿಯ ಕೆಲವರು ಇಂತಹ ಅವ್ಯವಹಾರಕ್ಕೆ ಮಧ್ಯವರ್ತಿಗಳಾಗಿ ನಿಂತಿದ್ದಾರೆಂಬ ಮಾಹಿತಿ ಈಗ ಹೊರಬಂದಿದೆ. ಈ ಅವ್ಯವಹಾರದ ಬಗ್ಗೆ ಮಿಲ್ಮಾಕ್ಕೂ ಮಾಹಿತಿ ಲಭಿಸಿತ್ತೆಂದೂ ಈ ಬಗ್ಗೆ ನಡೆದ ಮೇಲ್ನೋಟ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಇದರಿಂದಾಗಿ ಈ ಅವ್ಯವಹಾರದಲ್ಲಿ ಹಲವರು ಸಿಕ್ಕಿಬೀಳುವ ಸಾಧ್ಯತೆ ಉಂಟಾಗಿದೆ.







