ಸ್ಕೂಟರ್-ಲಾರಿ ಢಿಕ್ಕಿ: ಡಿವೈಎಸ್‌ಪಿ ಕಚೇರಿಯ ಪಾರ್ಟ್‌ಟೈಂ ನೌಕರನಿಗೆ ಗಂಭೀರ ಗಾಯ

ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪ ಸಂಭವಿಸಿದ ವಾಹನ ಅಪಘಾತದಲ್ಲಿ ಪೊಲೀಸ್ ಇಲಾಖೆಯ ನೌಕರರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸ್ಟೇಟ್ ಸ್ಪೆಷಲ್ ಬ್ರಾಂಚ್ ಕಚೇರಿಯ ಪಾರ್ಟ್‌ಟೈಂ ನೌಕರನಾದ ಮುಳಿಯಾರು ಬಾವಿಕ್ಕರೆಯ ಬಾಬುರಾಜ್ (64) ಗಾಯಗೊಂಡಿದ್ದು, ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7.30ರ ವೇಳೆ ಅಪಘಾತ ಸಂಭವಿಸಿದೆ. ವಿದ್ಯಾನಗರದಲ್ಲಿರುವ ಕಚೇರಿಗೆ ಕರ್ತವ್ಯಕ್ಕಾಗಿ ಬಾಬುರಾಜ್ ತೆರಳುತ್ತಿದ್ದರು. ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹೊಸ ಬಸ್ ನಿಲ್ದಾಣ ಹಳೆ ಸರ್ಕಲ್ ಸಮೀಪಕ್ಕೆ ತಲುಪಿದಾಗ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ. ಲಾರಿಯ ಮುಂಭಾಗದ ಟಯರ್‌ನ ಅಡಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡ ಬಾಬುರಾಜ್‌ರನ್ನು ಸಮೀಪದಲ್ಲಿದ್ದವರು ಹೊರ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಉಮೇಶ್‌ರ ನೇತೃತ್ವದಲ್ಲಿ ಅಗ್ನಿಶಾಮಕ ದಳ ತಲುಪಿ ಬಾಬುರಾಜ್‌ರನ್ನು ರಕ್ಷಿಸಿ ಆಸ್ಪತ್ರೆಗೆ ತಲುಪಿಸಿದ್ದಾರೆ.

You cannot copy contents of this page