ಎಸ್‌ಪಿನಗರ- ಹಿದಾಯತ್‌ನಗರ ರಸ್ತೆ ನವೀಕರಣೆ: ಧೂಳಿನ ಸಮಸ್ಯೆಗೆ ಪರಿಹಾರ ಡಾಮರೀಕರಣಕ್ಕೆ ಚಾಲನೆ

ವಿದ್ಯಾನಗರ: ಊರಿನಲ್ಲಿ ಉಂಟಾಗಿರುವ ಧೂಳಿನ ಸಮಸ್ಯೆಗೆ ಮೋಕ್ಷ ಉಂಟಾಯಿತು. ಎಸ್‌ಪಿನಗರ- ಹಿದಾಯತ್‌ನಗರ- ಕೋಪ ರಸ್ತೆ ಡಾಮರೀಕರಣ ಆರಂಭಗೊಂಡಿತು. ನವೀಕರಣೆಗಾಗಿ ಅಗೆದು ಹಾಕಿದ್ದ ರಸ್ತೆಯ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಧೂಳಿನ ಸಮಸ್ಯೆಯಿಂದ ಜನರಿಗೆ  ತೊಂದರೆಯಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈಗ ಡಾಮರೀಕರಣದ ಕೆಲಸ ಆರಂಭಿಸಲಾಗಿದೆ.

ವಾಹನಗಳು ಸಾಗುವಾಗ ಏಳುವ ಕಗ್ಗಲ್ಲಿನ ಹುಡಿಯ ಸಮಸ್ಯೆ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದವರಿಗೆ ಶ್ವಾಸ ಸಮಸ್ಯೆ, ಕಣ್ಣಿನ ಸಮಸ್ಯೆ, ರೋಗಾಣುಬಾಧೆ ಮೊದಲಾದ ಹಲವಾರು ಆರೋಗ್ಯ ಸಮಸ್ಯೆಗಳು ಕಂಡು ಬಂದಿತ್ತು. ವಿದ್ಯಾನಗರ- ಉಳಿಯತ್ತಡ್ಕ ರಸ್ತೆಯಲ್ಲಿ ಎಸ್‌ಪಿ ನಗರದಿಂದ ಹಿದಾಯತ್ ನಗರ ಮೂಲಕ ಕೋಪಾಕ್ಕೆ ಇದ್ದ 2640  ಮೀಟರ್ ರಸ್ತೆಯನ್ನು 4 ಕೋಟಿ ರೂ.ನಷ್ಟು ವೆಚ್ಚ ಮಾಡಿ ನವೀಕರಣೆ ಕಾಮಗಾರಿ ನಡೆಸಲಾಗುತ್ತಿದೆ.

ಕಳೆದ ಮಾರ್ಚ್‌ನಲ್ಲಿ ಇದರ ಕಾಮಗಾರಿ ಆರಂಭಿಸಲಾಗಿತ್ತು. 9 ತಿಂಗಳಲ್ಲಿ ಇದು ಪೂರ್ತಿಗೊಳ್ಳಬೇ ಕಾಗಿತ್ತು. ರಸ್ತೆಯನ್ನು ಅಗಲಗೊಳಿಸಿ ಮೆಕ್ಕಡಾಂ ಡಾಮರೀಕರಣ, ಚರಂಡಿ, ಸಂರಕ್ಷಣೆ ಗೋಡೆ ನಿರ್ಮಾಣಸಹಿತದ ಕಾಮಗಾರಿಗಳನ್ನು ಪೂರ್ತಿಗೊ ಳಿಸಬೇಕಾಗಿದೆ. ಮೆಕ್ಕಡಾಂ ಡಾಮರೀಕರಣ ನಡೆಸುವುದಕ್ಕೆ ಮುಂಚಿತವಾಗಿ ಕಗ್ಗಲ್ಲಿನ ಹುಡಿ ಮಿಶ್ರಿತವನ್ನು ರಸ್ತೆಗೆ ಹಾಕಿ ವಾರಗಳು ಕಳೆದರೂ ಮುಂದಿನ ಕೆಲಸ ನಡೆಸದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಸಮಸ್ಯೆ ಉಂಟಾಗಿತ್ತು. ಈ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಪರಿಸರವಿಡೀ ಧೂಳು ಆವರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯರು ರೋಷಗೊಂಡಿದ್ದರು. ಯುದ್ಧದ ಹಿನ್ನೆಲೆಯಲ್ಲಿ ಡಾಮರು ಲಭಿಸದಿರುವುದೇ ಕಾಮಗಾರಿ ವಿಳಂಬಗೊಳ್ಳಲು ಗುತ್ತಿಗೆದಾರರು ತಿಳಿಸಿದ್ದರು. ಶಾಸಕ ಎನ್.ಎ. ನೆಲ್ಲಿಕುನ್ನು ಮಧ್ಯೆಪ್ರವೇಶಿಸಿದ ಹಿನ್ನೆಲೆಯಲ್ಲಿ ಈಗ ಕಾಮಗಾರಿ ಆರಂಭಿಸಲಾಗಿದ್ದು, ಎಪ್ರಿಲ್ ಮೊದಲ ವಾರದಲ್ಲಿ ಪೂರ್ತಿಗೊಳ್ಳುವ ನಿರೀಕ್ಷೆ ಇದೆ ಎಂದು ಗುತ್ತಿಗೆದಾರ ಎಂ.ಎ. ಇಕ್ಬಾಲ್ ತಿಳಿಸಿದ್ದಾರೆ.

You cannot copy contents of this page