ಬೇಕಲದಲ್ಲಿ ಸೆರೆಗೀಡಾದ ಕಳವು ಆರೋಪಿಗಳು ಕಳತ್ತೂರಿನ ಮನೆಯಿಂದ ನಗ-ನಗದು ದೋಚಿದ ಪ್ರಕರಣದಲ್ಲೂ ಶಾಮೀಲು

ಕುಂಬಳೆ:  ಬೇಕಲ ಪೊಲೀಸರು ಸೆರೆಹಿಡಿದ  ಕುಖ್ಯಾತ ಕಳವು ಪ್ರಕರಣದ ಇಬ್ಬರು ಆರೋಪಿಗಳು ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಳತ್ತೂರು ಪಂಜಿಕಲ್ಲಿನ ಮನೆಯಿಂದ ನಗನಗದು ದೋಚಿದ ಪ್ರಕರಣದಲ್ಲೂ ಆರೋಪಿಗಳಾಗಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಪಾಲಕ್ಕಾಡ್ ಚಿಟ್ಟೂರು ಆಯಿರೂರು ಕೊಳಕ್ಕರೆಪರಂಬಿಲ್ ನಿವಾಸಿ ಜಲೀಲ್ ಯಾನೆ ಶಟರ್ ಜಲೀಲ್ (36), ಕಾಸರಗೋಡು  ಆಲಂಪಾಡಿಯ ಅಬ್ದುಲ್ ಲತೀಫ್ (46) ಎಂಬಿವರನ್ನು ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್‌ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಇವರನ್ನು ತನಿಖೆಗೊಳಪಡಿಸಿದಾಗ   ಕಳತ್ತೂರು ಪಂಜಿಕಲ್ಲಿನ ಯೂಸಫ್‌ರ ಮನೆಯಿಂದ 9 ಪವನ್ ಚಿನ್ನಾಭರಣ ಹಾಗೂ  ಒಂದು ಲಕ್ಷ ರೂಪಾಯಿ ಕಳವು ನಡೆಸಿರುವುದು ಇವರೇ ಆಗಿದ್ದಾರೆಂದು ತಿಳಿದುಬಂದಿದೆ.  ಫೆ. 14ರಂದು ಸಂಜೆಯಿಂದ ೧೫ರಂದು ಬೆಳಿಗ್ಗೆ 7ಗಂಟೆ ಮಧ್ಯೆ ಕಳವು ನಡೆದಿತ್ತು.  ಕಪಾಟನ್ನು ಕೆಡವಿ ನಗನಗದು ದೋಚಲಾಗಿದೆ.  ಯೂಸಫ್‌ರ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಈ ಕಳವು ನಡೆದಿತ್ತು.   ಇದಲ್ಲದೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ ನಾಲಕ್ಕರದ ಇ.ವಿ. ಗೋಪಾಲಕೃಷ್ಣನ್‌ರ ಮನೆಯಿಂದ 6 ಪವನ್ ಚಿನ್ನಾಭರಣ, ಒಂದು ಲಕ್ಷ ರೂ. ಫೆ. 7ರಂದು ಕಳವಿಗೀಡಾಗಿತ್ತು.  ಇಲ್ಲಿ ಕೂಡಾ ಮನೆಯ ಮುಂಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಿದ್ದರು. ಬಂಧಿತ ಆರೋಪಿಗಳನ್ನು ಸಮಗ್ರ ತನಿಖೆಗೊಳಪಡಿಸಿದರೆ ಇನ್ನಷ್ಟು ಕಳವು ಪ್ರಕರಣಗಳ ಮಾಹಿತಿ ಬೆಳಕಿಗೆ ಬರಲಿದೆಯೆಂದು ಪೊಲೀಸರು ನಿರೀಕ್ಷಿಸಿದ್ದಾರೆ.

RELATED NEWS

You cannot copy contents of this page