ಕಾಸರಗೋಡು: ಬಿರು ಬೇಸಿಗೆಯಲ್ಲೂ ಮೊಗ್ರಾಲ್ನ ಕಾಡಾಯಿಕುಳಂ ಜಲಸಮೃದ್ಧಿ ಯಲ್ಲಿದೆ. ಕೊಳವನ್ನು ಅಧಿಕೃತರು ಕೈ ಬಿಟ್ಟ ಕಾರಣ ಇದರ ನೀರಿನಲ್ಲಿ ಈಗ ಹಾವಸೆ ಹಾಗೂ ಸಸ್ಯಗಳು ಬೆಳೆದು ಕಾಡು ಆವರಿಸಿಕೊಂಡಿದೆ. ಮೊಗ್ರಾಲ್ ಶಾಲೆ ಬಳಿಯ ಜಲಸಮೃದ್ಧವಾದ ಕಾಡಾಯಿಕುಳಂ ನಾಶವಾಗುತ್ತಿದೆ. ಕಳೆದ ಮೂರು ದಶಕಗಳ ಮಧ್ಯೆ ಈ ಕೊಳವನ್ನು ಸಂರಕ್ಷಿಸಲು ಜಿಲ್ಲಾ ಪಂಚಾಯತ್ ಹಲವಾರು ಯೋಜನೆಗಳನ್ನು ಆವಿಷ್ಕರಿಸಿತ್ತು. ಅದರಲ್ಲಿ ಕೆಲವು ಯೋಜನೆಯಲ್ಲಿಯೇ ಕೊನೆಗೊಂಡಿತ್ತು.
ಕೆಲವು ಆರಂಭಗೊಂಡರೂ ಮುಂದುವರಿ ಯಲಿಲ್ಲ. ಕಳೆದ ವರ್ಷ ಜಿಲ್ಲಾ ಪಂಚಾಯತ್ ಕಿರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಹಲವು ಬಾರಿ ಈ ಕೊಳದ ಬಳಿಗೆ ಕಳುಹಿಸಿಕೊಟ್ಟಿತ್ತು. ಕೊನೆಗೆ ಅವರು ಒಂದು ಕೋಟಿ ರೂ.ಗಳ ಕೊಳ ಸಂರಕ್ಷಣೆ ಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯತ್ಗೆ ನೀಡಿದ್ದರು. ಈ ಯೋಜನೆ ಜ್ಯಾರಿಯಾಗುವ ಸಂತೋಷದಲ್ಲಿ ಸ್ಥಳೀಯರು ಕಾಯುತ್ತಿದ್ದರು. ಆದರೆ ಒಂದು ವರ್ಷ ಕಳೆದರೂ ಯೋಜನೆಯ ಯಾವುದೇ ಸೂಚನೆ ಲಭಿಸದೆ ಇಲ್ಲಿನವರು ಈಗಲೂ ಕಾಯುತ್ತಲೇ ಇದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕೊಳವನ್ನು ಉಪಯುಕ್ತಗೊಳಿಸಿದರೆ ಈ ಪರಿಸರದ ಕುಡಿಯುವ ನೀರಿಗೆ ಪರಿಹಾರವಾಗಬಹುದೆಂದು ಸ್ಥಳೀಯರು ಸೂಚಿಸುತ್ತಾರೆ.







