ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ನಿನ್ನೆ ಮತದಾನ ರಾತ್ರಿವರೆಗೆ ಮುಂದುವರಿದಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ ತನಕ ಮತದಾನ ನಿಗದಿಯಾಗಿದ್ದರೂ ಕೆಲವು ಕಡೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನ ವಿಳಂಬಗೊಂಡಿತು. ಇದರಿಂದಾಗಿ ರಾತ್ರಿವರೆಗೂ ಮತದಾನ ನಡೆಸಬೇಕಾಗಿ ಬಂದಿದೆ. ಸಂಜೆ 6 ಗಂಟೆ ತನಕ ಸರದಿ ಸಾಲಿನಲ್ಲಿ ನಿಂತವರಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಮಂಜೇಶ್ವರ ಹೊಸಬೆಟ್ಟು ಕಡಪ್ಪರದಲ್ಲಿ ರಾತ್ರಿ 8.15ರ ತನಕ ಮತದಾನ ಮುಂದುವರಿದಿದೆ. ಮಣ್ಣಂಗುಳಿ ಮೈದಾನ ಬಳಿಯ ಶಾಲೆಯ ಬೂತ್ ನಂಬ್ರ 89ರಲ್ಲಿ ಸಂಜೆ ವೇಳೆ ಮತಯಂತ್ರ ಹಾನಿಯಾದ ಕಾರಣ ರಾತ್ರಿ 7.30ರ ತನಕ ಮತದಾನ ಮುಂದುವರಿಯಿತು.






