ತಿರುವನಂತಪುರ: ಕೇರಳ ವಿಧಾನ ಸಭಾ ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಕ್ಷಣದಿಂದಲೇ ರಾಜ್ಯದಾದ್ಯಂತವಾಗಿ ಭರ್ಜರಿ ಮತದಾನ ನಡೆಯುತ್ತಿದೆ.
ಬೆಳಿಗ್ಗೆ 12.45 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ. 40.80ರಷ್ಟು ಮತದಾನ ನಡೆದಿದೆ. ಇದೇ ಸಮಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.39.50 ಮತದಾನ ನಡೆದಿದೆ. ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಭಾರೀ ಸಾಲುಗಳೇ ಗೋಚರಿಸಿದ್ದು ಇದು ಜನರು ಅತ್ಯುತ್ತಮ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆಂಬುದನ್ನು ಸೂಚಿಸುತ್ತದೆ.
ಮತದಾನ ಪ್ರಕ್ರಿಯೆ ಈತನಕ ಶಾಂತರೀತಿಯಲ್ಲಿ ಮುಂದುವರಿದಿದೆ. ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸರ ಹೊರತಾಗಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಈತನಕ ಅತೀ ಹೆಚ್ಚು ಮತದಾನ ನಡೆದ ಜಿಲ್ಲೆಗಳ ಸಾಲಿನಲ್ಲಿ ಕಾಸರಗೋಡು ಕೂಡಾ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಯ್ಯಾರಿನ 128ನೇ ಮತಗಟ್ಟೆಯಲ್ಲಿ ನಕಲಿ ಮತ ಚಲಾಯಿಸಲೆತ್ನಿಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮತಗಟ್ಟೆಯಲ್ಲಿ ಮತದಾರನೋರ್ವ ಗಲ್ಫ್ ಉದ್ಯೋಗಿ ಖಾಲಿದ್ ಎಂಬವರ ಓಟನ್ನು ಜಾಫರ್ ಎಂಬಾತ ನಕಲಿಯಾಗಿ ಚಲಾಯಿಸಲೆತ್ನಿಸಿದ್ದು ಆತನನ್ನು ಚುನಾವಣಾಧಿಕಾರಿ ತಡೆದು ನಿಲ್ಲಿಸಿ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಸಾಗಿಸಿ ಆತನ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ.
ವಿಧಾನಸಭಾ ಚುನಾವಣೆಯಲ್ಲಿ ನಮಗೆ 100ಕ್ಕೂ ಹೆಚ್ಚು ಸ್ಥಾನ ಲಭಿಸಲಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಎಡರಂಗದ ನೇತಾರರು ಹಾಗೂ ಯುಡಿಎಫ್ ನೇತಾರರು ತುಂಬು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಯುಡಿಎಫ್ ಗಾಗಲೀ ಎಲ್‌ಡಿಎಫ್‌ಗಾಗಲೀ ಸ್ಪಷ್ಟ ಬಹುಮತ ಲಭಿಸದು. ಎನ್‌ಡಿಎ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಮಾತ್ರವಲ್ಲ ಅತೀ ನಿರ್ಣಾಯಕ ಪಾತ್ರ ವಹಿಸಲಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೇರಳ ರಾಜ್ಯಪಾಲರಾದ ಬಳಿಕ ರಾಜೇಂದ್ರ ಅರ್ಲೇಕರ್ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಇಂದು ಬೆಳಿಗ್ಗೆ ಇದೇ ಪ್ರಥಮವಾಗಿ ಚೊಚ್ಚಲ ಮತದಾನ ಚಲಾಯಿಸಿದರು. ಎಲ್ಲರೂ ಮತ ಚಲಾಯಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.







