ಕಾಸರಗೋಡು: ಜಿಲ್ಲೆಯಲ್ಲಿ ಕಾಡುಹಂದಿಗಳ ಉಪಟಳ ತೀವ್ರ ಗೊಂಡಿರುವಾಗ ಅಧಿಕಾರಿಗಳು ನಿಶ್ಚಿಂತೆಯಲ್ಲಿದ್ದಾರೆಂಬ ಆರೋಪ ತೀವ್ರಗೊಂಡಿದೆ. ವನ್ಯಮೃಗಗಳ ಹಾವಳಿಗೆ ತಡೆಯೊಡ್ಡಲು ಕೇಂದ್ರ, ರಾಜ್ಯ ಸರಕಾರಗಳು, ಸುಪ್ರೀಂಕೋರ್ಟ್ ಕಠಿಣ ನಿರ್ದೇಶಗಳನ್ನು ನೀಡಿರುವಾಗಲೂ ಕಾಸರಗೋಡಿನಲ್ಲಿ ವನ್ಯಮೃಗಗಳ ದಾಳಿ ತಡೆಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ನೀತಿಯನ್ನು ಅನುಸರಿಸುತ್ತಿದ್ದಾರೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಕಾಡುಹಂದಿಯ ದಾಳಿಯಿಂದ ಇತ್ತೀಚೆಗೆ ಯುವಕನೋರ್ವ ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದನು. ಊಜಂಪಾಡಿಯ ಅಖಿಲ್ ಸಿ. ರಾಜು ಎಂಬವರಿಗೆ ಬುಧವಾರ ರಾತ್ರಿ ಕಾಡುಹಂದಿ ದಾಳಿ ನಡೆಸಿದೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ಅಖಿಲ್‌ರ ಮೇಲೆ ಕಾಡುಹಂದಿಗಳ ಹಿಂಡು ದಾಳಿ ನಡೆಸಿರುವುದಾಗಿ ದೂರಲಾಗಿದೆ. ಅದೇ ರೀತಿ ಇತ್ತೀಚೆಗೆ ಕುಂಬಳೆ ಪೆರುವಾಡ್ ನಿವಾಸಿ ಹಾರಿಸ್ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಕಾಡುಹಂದಿಯೊಂದು ಅಡ್ಡವಾಗಿ ಓಡಿದುದರಿಂದ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇದರಿಂದ ಹಾರಿಸ್ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ದೇಲಂಪಾಡಿ, ಊಜಂಪಾಡಿ, ಮಂಜೇಶ್ವರ, ಮೊಗ್ರಾಲ್ ಎಂಬೀ ಪ್ರದೇಶಗಳಲ್ಲಿ ಕಾಡು ಹಂದಿಗಳು ವ್ಯಾಪಕವಾಗಿ ಕೃಷಿ ನಾಶಗೈಯ್ಯುತ್ತಿರುವು ದಾಗಿ ಈ ಹಿಂದೆಯೇ ದೂರು ಕೇಳಿ ಬರುತ್ತಿದೆ. ಮೊಗ್ರಾಲ್ ವಲಿಯನಾಂಗಿ ರಸ್ತೆಯ ಕೆ. ಮೊಹಮ್ಮದ್ ಕುಂಞಿಯ ವರ 3 ವರ್ಷ ಪ್ರಾಯದ 15 ತೆಂಗಿನ ಗಿಡಗಳನ್ನು ಕೆಲವು ದಿನಗಳ ಹಿಂದೆ ಕಾಡು ಹಂದಿಗಳು ನಾಶಪಡಿಸಿದ್ದವು. ಕಳೆದ ವರ್ಷವೂ ಮನೆ ಹಿತ್ತಿಲಿನ ಬಾಳೆ ಸಹಿತ ವಿವಿಧ ಕೃಷಿಯನ್ನು ವ್ಯಾಪಕವಾಗಿ ಕಾಡುಹಂದಿಗಳು ನಾಶಗೊಳಿಸಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಈ ರೀತಿ ಕಾಡು ಹಂದಿಗಳ ಉಪಟಳದಿಂದ ಕೃಷಿ ನಾಶಗೊಳ್ಳುತ್ತಿರುವ ಬಗ್ಗೆ ಪದೇ ಪದೇ ವರದಿಯಾಗುತ್ತಿದೆ. ಈಗ ಮನುಷ್ಯರ ಮೇಲೂ ದಾಳಿ ನಡೆಯುತ್ತಿದೆ. ಇದನ್ನು ತಡೆಯಲು ಕೃಷಿ ಇಲಾಖೆಯಿಂದಲೋ, ಅರಣ್ಯ ಇಲಾಖೆಯಿಂದಲೋ ಯಾವುದೇ ಕ್ರಮ ಉಂಟಾಗದಿರುವುದು ನಾಗರಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮನುಷ್ಯರಿಗೆ ಹಾಗೂ ಕೃಷಿಗೆ ಬೆದರಿಕೆಯಾಗಿ ಪರಿಣಮಿಸಿರುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ನಿರ್ದೇಶವಿದ್ದರೂ ಅದಕ್ಕೆ ಸಂಬಂಧ ಪಟ್ಟವರು ಅನುಮತಿ ನೀಡುತ್ತಿಲ್ಲವೆಂಬ ಆರೋಪವು ಕೇಳಿ ಬರುತ್ತಿದೆ. ಆಕ್ರಮಣಕಾರಿಗಳಾದ ವನ್ಯಜೀವಿಗಳನ್ನು ಕೊಲ್ಲಬಹುದೆಂದು ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕರಡು ಮಸೂದೆಗೆ ರಾಜ್ಯ ಸರಕಾರ ಅಂಗೀಕಾರ ನೀಡಿತ್ತು. ಆದರೆ ಸರಕಾರ ನೀಡುವ ಆದೇಶಗಳನ್ನು ಪಾಲಿಸಲು ಸರಕಾರಿ ನೌಕರರು ಹಿಂಜರಿ ಯುತ್ತಿದ್ದಾರೆಂದು ನಾಗರಿಕರು ತಿಳಿಸುತ್ತಿದ್ದಾರೆ.







