ಕಾಞಂಗಾಡ್ ವಿಧಾನಸಭಾ ಮಂಡಲ ಈ ಬಾರಿ ಸಿಪಿಎಂ ವಶಪಡಿಸಲಿದೆಯೇ? ಚರ್ಚೆ ಸಕ್ರಿಯ

ಹೊಸದುರ್ಗ: ಜಿಲ್ಲೆಯ ೫ ವಿಧಾನಸಭಾ ಮಂಡಲಗಳಲ್ಲಿ ಎಡಪಕ್ಷ ಹಾಗೂ ಸಿಪಿಎಂ 100 ಶೇಕಡಾ ಜಯ ಸಾಧ್ಯತೆ ಇರಿಸಿ ಕೊಂಡಿರುವ ಮಂಡಲವಾಗಿದೆ ಕಾಞಂಗಾಡ್. ಹಳೆಯ ಹೊಸ ದುರ್ಗ ಮಂಡಲ ಹೆಸರು ಬದಲಿಸಿ ಕಾಞಂಗಾಡ್ ಎಂದು ಕರೆಸಿ ಕೊಂಡಿದೆ. ಆ ಬಳಿಕ ಎಡಪಕ್ಷದ ಅಭ್ಯರ್ಥಿ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಸಿಪಿಐ ಪಕ್ಷದ ಉನ್ನತ ಮುಖಂಡ, ರಾಜ್ಯ ಕಂದಾಯ ಸಚಿವರೂ ಆಗಿದ್ದ ಇ. ಚಂದ್ರಶೇಖರನ್ ಇಲ್ಲಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ. ಅದಕ್ಕಿಂತಲೂ ಮುಂಚಿತ ಹೊಸ ದುರ್ಗ ಮಂಡಲವಾಗಿದ್ದಾಗಲೂ ಸಿಪಿಐಯ ಅಭ್ಯರ್ಥಿಗಳೇ ಈ ಮಂಡಲದಿಂದ ಸ್ಪರ್ಧಿಸುತ್ತಿದ್ದರು. ಮೊದಲ ಹಂತದಲ್ಲಿ ವಿಪಕ್ಷದಲ್ಲೂ, ಎರಡನೇ ಬಾರಿ ಸಚಿವರಾಗಿಯೂ ಇದ್ದ ಇ. ಚಂದ್ರಶೇಖರನ್ ಪ್ರತ್ಯೇಕ ಪರಿಗಣನೆಯ ಮೂಲಕ ಮೂರನೇ ಬಾರಿ ವಿಧಾನಸಭೆಗೆ ತಲುಪಿದ್ದರು. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಎಡಪಕ್ಷ ಜಯ ನಿರೀಕ್ಷೆಯಲ್ಲಿದ್ದು, ಆದರೆ ಈ ಬಾರಿ ಇಲ್ಲಿಂದ ಸ್ಪರ್ಧಿಸುವವರು ಯಾರೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಂಡಲವನ್ನು ಸಿಪಿಎಂ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಮಧ್ಯೆ ಚರ್ಚೆ ಸಕ್ರಿಯವಾಗಿದೆ. ಆದರೆ ಆ ರೀತಿಯ ಪ್ರಚಾರಗಳಿಗೆ ಆಧಾರವಿಲ್ಲವೆಂದು ಸಿಪಿಐ ಮೂಲಗಳು ತಿಳಿಸಿವೆ. ಈ ಬಾರಿಯೂ ಕಾಞಂಗಾಡ್ ವಿಧಾನಸಭಾ ಮಂಡಲದಿಂದ ಸಿಪಿಐ ಅಭ್ಯರ್ಥಿಯೇ ಸ್ಪರ್ಧಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಿಪಿಐಯ ರಾಜ್ಯ ಕೌನ್ಸಿಲ್ ಸದಸ್ಯ ಗೋವಿಂದನ್ ಪಳ್ಳಿಕಾಪಿಲ್ ಇಲ್ಲಿಂದ ಸ್ಪರ್ಧಿಸುವರೆಂಬ ಬಗ್ಗೆ ಸೂಚನೆ ಲಭಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಐಕ್ಯರಂಗಕ್ಕೆ ಬಹುಮತ ಲಭಿಸಿದ ಸನ್ನಿವೇಶದಲ್ಲಿ ಘಟಕ ಪಕ್ಷಗಳಲ್ಲಿ ಬೇಸರವುಂಟುಮಾಡುವಂತಹ ನಿಲುವುಗಳನ್ನು ಸಿಪಿಎಂ ನೇತೃತ್ವ ಕೈಗೊಳ್ಳದು ಎಂದು ಲೆಕ್ಕಹಾಕಲಾಗುತ್ತಿದೆ.

RELATED NEWS

You cannot copy contents of this page