ಉಪ್ಪಳ ಫ್ಲೈಓವರ್‌ನಲ್ಲಿ ವಾಹನ ಸಂಚಾರ ಆರಂಭ

ಉಪ್ಪಳ: ತಲಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಸಂಚಾರಕ್ಕೆ ತೆರೆದು ಕೊಡಲು ಸಿದ್ಧತೆಯ ಮಧ್ಯೆ ಉಪ್ಪಳ ಪೇಟೆಯಲ್ಲಿ ಫ್ಲೈಓವರ್‌ನಲ್ಲಿ ನಿನ್ನೆಯಿಂದ ವಾಹನ ಸಂಚಾರ ಆರಂಭಗೊಂಡಿದೆ. ಸುಮಾರು 200 ಮೀಟರ್ ಉದ್ದದ ಫ್ಲೈಓವರ್‌ನಲ್ಲಿ ಈಗ ವಾಹನಗಳು ಸಂಚರಿಸುತ್ತಿದ್ದು, ಪೇಟೆಯಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆಗೆ ಮುಕ್ತಿ ದೊರಕಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಹೆದ್ದಾರಿ ಕಾಮಗಾರಿ ಆರಂಭಗೊಂಡಂದಿನಿಂದ ಉಪ್ಪಳ ಪೇಟೆಯಲ್ಲಿ ಕಾಸರಗೋಡಿನಿಂದ ಮಂಗಳೂರು ಕಡೆಗೆ ಸಂಚರಿಸುವ ಸರ್ವೀಸ್ ರಸ್ತೆಯಲ್ಲಿ ಗಂಟೆಗಳ ಕಾಲ ಕಾದು ಸಂಚರಿಸಬೇಕಾದ ಸ್ಥಿತಿ ಉಂಟಾಗಿತ್ತು. ಇದು ಸಾರ್ವಜನಿಕರಿಗೆ ಸಂಕಷ್ಟ ತಂದಿತ್ತು. ಫ್ಲೈಓವರ್‌ನಲ್ಲಿ ವಾಹನ ಸಂಚಾರ ಆರಂಭಗೊಂಡ ಹಿನ್ನೆಲೆಯಲ್ಲಿ ಸರಕು ಲಾರಿಗಳ ಸಹಿತ ಇತರ ವಾಹನಗಳು ಸರ್ವೀಸ್ ರಸ್ತೆ ಪ್ರವೇಶಿಸಬೇಕಾದ ಅಗತ್ಯವಿಲ್ಲದ ಕಾರಣ ಈ ರಸ್ತೆಯಲ್ಲಿ ಬಸ್ ಸಂಚಾರ ಸುಗಮಗೊಳ್ಳಲಿದೆ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

You cannot copy contents of this page