ಉಬ್ರಂಗಳದಲ್ಲಿ ಬೈಕ್ ಅಪಘಾತ: ಯುವತಿ ದಾರುಣ ಮೃತ್ಯು; ಪತಿ, ಪುತ್ರಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲು

ಬದಿಯಡ್ಕ: ಪಿಲಾಂಕಟ್ಟೆ ಸಮೀಪದ ಉಬ್ರಂಗಳದಲ್ಲಿ ನಿನ್ನೆ ರಾತ್ರಿ ಬೈಕ್ ಅಪಘಾತಕ್ಕೀಡಾಗಿ ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಾವಿನಕಟ್ಟೆ ಕೋಳಾರಿ ಯಡ್ಕ  ನಿವಾಸಿಯೂ, ಖಾಸಗಿ ಬಸ್ ಕಂಡಕ್ಟರ್ ಆಗಿರುವ ದಿನೇಶ್ ಎಂಬವರ ಪತ್ನಿ ಅನುಷ (೨೫) ಮೃತಪಟ್ಟ ದುರ್ದೈವಿ ಯಾಗಿದ್ದಾರೆ.  ಬೈಕ್ ಚಲಾಯಿಸು ತ್ತಿದ್ದ ದಿನೇಶ್ ಹಾಗೂ ಪುತ್ರಿ ಶಿವನ್ಯ (೨) ಎಂಬಿವರು ಗಂಭೀರ ಗಾಯಗೊಂಡಿದ್ದಾರೆ. ದಿನೇಶ್‌ರನ್ನು ಚೆಂಗಳ ಆಸ್ಪತ್ರೆಯಲ್ಲಿ  ಹಾಗೂ ಶಿವನ್ಯಳನ್ನು  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಇಬ್ಬರು ಚೇತರಿಸುತ್ತಿದ್ದಾ ರೆಂದು ಆಸ್ಪತ್ರೆ  ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿ ದಿನೇಶ್‌ರ ಸ್ನೇಹಿತನ ಮನೆಗೆ ಈ  ಮೂರು ಮಂದಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಉಬ್ರಂಗಳದ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ಹತ್ತು ಅಡಿ ಆಳದ ಹೊಂಡಕ್ಕೆ ಮಗುಚಿಬಿದ್ದಿದೆ. ಬೊಬ್ಬೆ ಕೇಳಿ ಓಡಿ ತಲುಪಿದ ನಾಗರಿಕರು ಮೂವರನ್ನು ಮೇಲಕ್ಕೆತ್ತಿ ಮೊದಲು ಬದಿಯಡ್ಕದ ಆಸ್ಪತ್ರೆಗೆ ತಲುಪಿಸಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಚೆಂಗಳದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅನುಷ ಮೃತಪಟ್ಟಿದ್ದಾರೆ. ದಿನೇಶರನ್ನು ಅಲ್ಲಿ ದಾಖಲಿಸಿದ ಬಳಿಕ ಪುತ್ರಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಅನುಷರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

ನೆಲ್ಲಿಕಟ್ಟೆ ಅದ್ರುಕುಳಿಯ ದಿ| ಜಯ-ವನಿತ ದಂಪತಿಯ ಪುತ್ರಿಯಾದ ಅನುಷ ಪತಿ, ಪುತ್ರಿ, ಸಹೋದರ ಜಯ ದೀಪ್, ಸಹೋದರಿ ಅಶ್ವಿನಿ ಹಾಗೂ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page