ಐದು ರಾಜ್ಯಗಳ ೧೪ ಕಡೆಗಳಲ್ಲಿ ಎನ್‌ಐಎ ಏಕ ಕಾಲದಲ್ಲಿ ದಾಳಿ

ತಿರುವನಂತಪುರ: ಕೇರಳ, ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಾಗಿ ೧೪ ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪೋಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೇಂದ್ರಗಳಿಗೆ ದಾಳಿ ನಡೆಸಿದೆ.

ಕೇರಳದಲ್ಲಿ ಕಣ್ಣೂರಿನ ಮನೆಗಳು ಮತ್ತು ಮಲಪ್ಪುರದ ತಿರೂರಿನ ಐದು ಮನೆಗಳು ಎನ್‌ಐಎ ದಾಳಿ ನಡೆಸಿದೆ. ಇದರ ಹೊರತಾಗಿ ಕೊಲ್ಲಂನ ಕೇಂದ್ರವೊಂದಕ್ಕೂ  ದಾಳಿ ನಡೆದಿದೆ.  ಹೀಗೆ ದಾಳಿ ನಡೆದ ಮನೆಗಳ ಮಾಲಕರನ್ನು ಎನ್‌ಐಎ ತನ್ನ ಕಚೇರಿಗೆ ಸಾಗಿಸಿ ಅವರ  ಹೇಳಿಕೆ ದಾಖಲಿಸಿಕೊಂಡಿದೆ. ಈ ಕಾರ್ಯಾಚರಣೆಗೆ ಕೇರಳ ಪೊಲೀಸರೂ ಸಹಾಯ ಒದಗಿಸಿದ್ದಾರೆ.

ಕೊಲ್ಲಂ ಶಾಸ್ತಾಂಗೋಡಿನ ಕಂಬಲಡಿಯ ಶಿಬು (೩೬) ಎಂಬಾತನ ಮನೆಗೆ ಎನ್‌ಐಎ ದಾಳಿ ನಡೆಸಿ ಆತನನ್ನು ವಶಕ್ಕೆ ತೆಗೆದುಕೊಂಡಿದೆ. ಕೊಲ್ಲಂ ತಾವರಕರೆಯ ಪಿಎಫ್‌ಐ  ಕಾರ್ಯಕರ್ತನೋರ್ವನ ಮನೆಗೂ ಎನ್‌ಐಎ ದಾಳಿ ನಡೆಸಿದೆ.ಉಗ್ರ ಚಟುವಟಿಕೆಯ ಭಾಗವಾಗಿರುವ ಶಂಕೆಯಲ್ಲಿ ಈ ದಾಳಿ ನಡೆಸಲಾಗಿದೆ. ಇದರ ಹೊರತಾಗಿ ದಕ್ಷಿಣಕನ್ನಡ ಜಿಲ್ಲೆ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಲದಲ್ಲೂ ಎನ್‌ಐಎ ಹಲವೆಡೆಗಳಿಗೆ ದಾಳಿ ನಡೆಸಿದೆ.

೨೦೪೭ರ ಒಳಗೆ ಭಾರತದಲ್ಲಿ ಪಿಎಫ್‌ಐ ಆರ್ಮಿ ಸ್ಥಾಪಿಸಲು ಮುಂದಾಗಿದ್ದ ಶಂಕೆ ಎನ್‌ಐಎಗೆ ಲಭಿಸಿದ್ದು, ಆ ಪ್ರಧಾನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆಯೆಂದು ತಿಳಿಯಲಾಗಿದೆ. ಎನ್‌ಐಎ ಈ ಹಿಂದೆಯೂ ಇದೇ ರೀತಿ ಹಲವು ದಾಳಿ ನಡೆಸಿತ್ತು. ಅದಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಿತ್ತು.  ಹಲವು ಪುರಾವೆಗಳನ್ನು ವಶಪಡಿಸಿಕೊಂಡಿತ್ತು. ಅದರ ಬೆನ್ನಲ್ಲೇ ಎನ್‌ಐಎ ನಿನ್ನೆ ಈ ದಾಳಿ ಆರಂಭಿಸಿದೆ.

Leave a Reply

Your email address will not be published. Required fields are marked *

You cannot copy content of this page