ಕಾಟುಕುಕ್ಕೆ-ಖಂಡೇರಿಯಲ್ಲಿ ನೀರಿಲ್ಲ: ಬಿಲ್ ಮಾತ್ರ!
ಪೆರ್ಲ: ಕಾಟುಕುಕ್ಕೆ, ಖಂಡೇರಿ, ಕೊಲ್ಯ ಎಂಬೆಡೆಗಳಲ್ಲಿ ಜಲಜೀವನ್ ಮಿಶನ್ ಯೋಜನೆಯ ಜಲ ವಿತರಣೆ ನಡೆಯುತ್ತಿಲ್ಲವೆಂದು ದೂರಲಾಗಿದೆ. ಇದರಿಂದ ೧೦೦ರಷ್ಟು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ೨ ವರ್ಷ ಹಿಂದೆ ಸಂಪರ್ಕ ಲಭಿಸಿದ್ದ ಕುಟುಂಬಗಳಿಗೆ ಈಗ ನೀರು ವಿತgಣೆಯಾಗುವುದಿಲ್ಲ. ಆದರೆ ಉಪಯೋಗಿಸಿದ ನೀರಿಗೆ ೨೦೦೦ ರೂ. ಪಾವತಿಸಲು ಮೊಬೈಲ್ಗೆ ಸಂದೇಶ ಲಭಿಸಿದೆ.
ಇತರ ಜಲಯೋಜನೆಗಳಿಲ್ಲದ ಎಣ್ಮಕಜೆ ಪಂಚಾಯತ್ನ ನಾಲ್ಕನೇ ವಾರ್ಡ್ನ ಈ ಪ್ರದೇಶದ ಜನರ ಏಕ ಆಶ್ರಯವಾಗಿದೆ ಈ ಯೋಜನೆ. ಕಾಟುಕುಕ್ಕೆಯ ಹೈಯರ್ ಸೆಕೆಂಡರಿ ಶಾಲೆಯವರೆಗೆ ನೀರು ಲಭಿಸುತ್ತಿದೆ. ಇಲ್ಲಿಂದ ಖಂಡೇರಿಗೆ ತೆರಳುವ ಲೈನ್ ತುಂಡಾಗಿ ನೀರು ಪೋಲಾಗುವ ಸ್ಥಿತಿ ಇತ್ತು. ಬಳಿಕ ಸೋರಿಕೆಯನ್ನು ಮುಚ್ಚಲಾಯಿತಾದರೂ ಬಳಿಕ ಈ ಪೈಪ್ ಮೂಲಕ ನೀರು ಲಭಿಸುತ್ತಿಲ್ಲ.ಮನೆ ಪರಿಸರದಲ್ಲಿ ನಳ್ಳಿ, ಮೀಟರ್ ಸ್ಥಾಪಿಸಲಾಗಿದೆ. ಖಂಡೇರಿ ಎಸ್ಸಿ ಕಾಲನಿಗೂ ನೀರು ಲಭಿಸುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದರೂ ಪೈಪ್ನಲ್ಲಿ ನೀರು ಹರಿಯದಿರಲು ಕಾರಣವೇನೆಂದು ತಿಳಿದುಬಂದಿಲ್ಲವೆಂದು ಸ್ಥಳೀಯರಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಹಣಕೊಟ್ಟು ನೀರು ಖರೀದಿಸಬೇಕಾದ ಸ್ಥಿತಿ ಇಲ್ಲಿನವರಿಗಿದೆ.