ಕಾಸರಗೋಡು- ತಿರುವನಂತಪುರ ವಂದೇ ಭಾರತ್ ರೈಲು ಸೇವೆ ಮಂಗಳೂರು ತನಕ ವಿಸ್ತರಣೆ ಜ. ೧ರಿಂದ
ಕಾಸರಗೋಡು: ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿದ ಕಾಸರಗೋಡು- ತಿರುವನಂತಪುರ ತನಕದ ವಂದೇ ಭಾರತ್ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಿಸಲಾಗಿದೆ. ಇದರಂತೆ ಜನವರಿ ೧ರಿಂದ ಈ ರೈಲು ಕಾಸರಗೋಡಿನ ಬದಲು ಮಂಗಳೂರಿನಿಂದ ಸೇವೆ ಆರಂಭಿಸಲಿದೆ.
ಇದರ ಮೊದಲು ಈ ರೈಲು ಕಾಸರಗೋಡಿನಿಂದ ಮಂಗಳೂರು ತನಕದ ೪೬ ಕಿಲೋ ಮೀಟರ್ ಪರೀಕ್ಷಾರ್ಥ ಸೇವೆ ನಡೆಸಲಿದೆ.
ಈಗ ಈ ರೈಲು ಕಾಸರಗೋಡಿ ನಿಂದ ಬೆಳಿಗ್ಗೆ ೭ ಗಂಟೆಗೆ ತಿರುವನಂ ತಪುರದತ್ತ ಸೇವೆ ಆರಂಭಿಸುತ್ತಿದ್ದು, ಇನ್ನು ಇದರ ಸೇವೆ ಮಂಗಳೂರು ತನಕ ವಿಸ್ತರಿಸಲ್ಪಡಲಿರುವ ಹಿನ್ನೆಲೆಯಲ್ಲಿ ಈ ಸೇವಾ ಸಮಯದಲ್ಲಿ ಸಹಜವಾಗಿಯೇ ಬದಲಾವಣೆ ಉಂಟಾಗಲಿದೆ. ಮಂಗಳೂರಿನಿಂದ ಕಾಸರಗೋಡಿಗೆ ರೈಲು ತಲುಪಲು ಅರ್ಧ ತಾಸು ಸಮಯ ಬೇಕಾಗಿ ಬರುತ್ತಿದೆ. ಆದ್ದರಿಂದ ಅದಕ್ಕೆ ಹೊಂದಿಕೊಂಡು ಕ್ರಮೀಕರಣ ಉಂಟಾಗಲಿದೆ.
ವಂದೇ ಭಾರತ್ ರೈಲು ಸೇವೆಯನ್ನು ಮೊದಲು ತಿರುವ ನಂತಪುರದಿಂದ ಕಣ್ಣೂರು ತನಕವಾಗಿ ನಿಶ್ಚಯಿಸಲಾಗಿತ್ತು. ಬಳಿಕ ಅದರ ಸೇವೆಯನ್ನು ಕಾಸರಗೋಡು ತನಕ ವಿಸ್ತರಿಸಲಾಯಿತು. ಆದರೆ ಈ ರೈಲು ಸೇವೆಯನ್ನು ಕಣ್ಣೂರಿನ ಕಾಸರಗೋಡು ತನಕ ವಿಸ್ತರಿಸಿದಾಗ ಅದರ ಭದ್ರತಾ ವಿಷಯ ರೈಲ್ವೇ ಇಲಾಖೆಗೆ ಒಂದು ದೊಡ್ಡ ಸವಾಲಾಗಿ ತಲೆಯೆತ್ತಿತ್ತು. ಏಕೆಂದರೆ, ಕಾಸರಗೋಡು ರೈಲು ನಿಲ್ದಾಣದಲ್ಲಿ ಯಾರ್ಡೋ ಸೌಕರ್ಯಗಳಿಲ್ಲ. ರೈಲಿಗೆ ಕೇವಲ ನೀರನ್ನು ಮಾತ್ರವೇ ತುಂಬಿಸುವ ಸೌಕರ್ಯ ಮಾತ್ರವೇ ಇಲ್ಲಿದೆ. ಇನ್ನು ರೈಲಿನ ಶುಚೀಕರಣ ಕೆಲಸವನ್ನು ಮಂಗಳೂರಿನ ಮೆಕ್ಯಾನಿಕ್ ವಿಭಾಗದ ನೇತೃತ್ವದಲ್ಲಿ ಕಾರ್ಮಿಕರನ್ನು ಅಲ್ಲಿಂದ ಕಾಸರಗೋಡಿಗೆ ತರಿಸಿ ಅವರಿಂದ ಈಗ ಮಾಡಿಸಲಾಗುತ್ತಿದೆ.
ಈ ರೈಲಿನ ಲೋಕೋ ಪೈಲೆಟ್‌ಗಳಿಗೆ ವಿಶ್ರಾಂತಿ ಪಡೆಯಲೂ ಇಲ್ಲಿ ಅಗತ್ಯದ ಸೌಕರ್ಯಗಳಿಲ್ಲ. ಆದ್ದರಿಂದಾಗಿ ಅವರು ಈ ರೈಲು ನಿಲ್ದಾಣದ ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳಲ್ಲೇ ರಾತ್ರಿ ವಿಶ್ರಾಂತಿ ಪಡೆಯಬೇಕಾದ ಸ್ಥಿತಿಯೂ ಈಗಿದೆ. ಇನ್ನು ಈ ರೈಲು ಸೇವೆ ಇಲ್ಲಿಂದ ಮಂಗಳೂರು ತನಕ ವಿಸ್ತರಿಸಲ್ಪಟ್ಟಿಲ್ಲ, ಇಂತಹ ಸಮಸ್ಯೆಗಳಿಗೆ ಪರಿಹಾರ ಉಂಟಾಗಲಿದೆ.