ಕುಂಬಳೆ ಎಸ್.ಐ, ಕುಟುಂಬಕ್ಕೆ ಕೊಲೆ  ಬೆದರಿಕೆ: ಆರೋಪಿಯ ಮಾಹಿತಿ ಲಭ್ಯ

ಕುಂಬಳೆ: ಕುಂಬಳೆ ಠಾಣೆಯಲ್ಲಿ ಎಸ್.ಐ ಆಗಿದ್ದ ರಜಿತ್ ಹಾಗೂ ಕುಟುಂಬಕ್ಕೆ ಕೊಲೆಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿಯ ಮಾಹಿತಿ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಇದೀಗ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.  ಅಗೋಸ್ತ್ ೩೦ರಂದು ಸಂಜೆ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಎಸ್‌ಐ ಹಾಗೂ ಕುಟುಂಬಕ್ಕೆ ಕೊಲೆ ಬೆದರಿಕೆಯೊಡ್ಡಿದ್ದಾರೆ. ಎಸ್‌ಐ ಹಾಗೂ ಕುಟುಂಬ ವಾಸಿಸುವ ಮೊಗ್ರಾಲ್ ಮಾಳಿಯಂಗರದ ಬಾಡಿಗೆ ಮನೆ ಸಮೀಪಕ್ಕೆ ನೀಲಿ ಬಣ್ಣದ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಯುವಕರು ಗೇಟ್‌ನ ಮುಂಭಾಗದಲ್ಲಿ ಸ್ಕೂಟರ್ ನಿಲ್ಲಿಸಿ ಎಸ್‌ಐ ರಜಿತ್‌ರ ಮನೆಯಲ್ಲವೇ ಎಂದು ಮನೆಯವರಲ್ಲಿ ಪ್ರಶ್ನಿಸಿದ್ದಾರೆ.  ಮನೆಯವರು ಹೌದೆಂದು ತಿಳಿಸಿದಾಗ ತಂಡ ಅಸಭ್ಯವಾಗಿ ನಿಂದಿಸಿ ಕೊಲೆ ಬೆದರಿಕೆಯೊಡ್ಡಿ ಪರಾರಿಯಾಗಿತ್ತು. ಈ ಬಗ್ಗೆ ರಜಿತ್‌ರ ಪತ್ನಿಯ ತಂದೆ ಕೊಲ್ಲಂ ಸಿಟಿ ನಿವಾಸಿಯಾದ ಉಣ್ಣಿ ಕೃಷ್ಣನ್ (೫೭) ಪೊಲೀಸರಿಗೆ ದೂರು ನೀಡಿದ್ದರು. ಸ್ಕೂಟರ್‌ನಲ್ಲಿ ತಲುಪಿ ಕೊಲೆ ಬೆದರಿಕೆಯೊಡ್ಡಿ ಪರಾರಿಯಾದ ತಂಡದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಅದನ್ನು ಪರಿಶೀಲಿಸಿದಾಗ ಆರೋಪಿಗಳ ಕುರಿತು ಮಾಹಿತಿ ಲಭಿಸಿದೆ.

ಪೊಲೀಸರು ಹಿಂಬಾಲಿಸಿದ ಹಿನ್ನೆಲೆಯಲ್ಲಿ ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಇತ್ತೀಚೆಗೆ ಕಳತ್ತೂರುಪಳ್ಳಕ್ಕೆ ಮಗುಚಿಬಿದ್ದಿತ್ತು. ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು  ಆ ಕಾರಿನಲ್ಲಿದ್ದರು.  ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪೇರಾಲ್ ಕಣ್ಣೂರು ನಿವಾಸಿ ಪ್ಲಸ್‌ಟು ವಿದ್ಯಾರ್ಥಿಯಾದ ಮೊಹಮ್ಮದ್ ಫರ್ಹಾಸ್ ಇತ್ತೀಚೆಗೆ ಮೃತಪಟ್ಟಿದ್ದನು.

ಈ ಘಟನೆಗೆ ಸಂಬಂಧಿಸಿ ತಂಡ ತಲುಪಿ  ಎಸ್‌ಐ ಹಾಗೂ ಕುಟುಂಬಕ್ಕೆ ಕೊಲೆಬೆದರಿಕೆಯೊಡ್ಡಿರುವುದಾಗಿ ತಿಳಿಸಲಾಗಿದೆ.

You cannot copy contents of this page