ಕೆಂಪುಕೋಟೆಗೆ ನುಗ್ಗಲೆತ್ನಿಸಿದ ಐವರು ಬಾಂಗ್ಲಾ ಪ್ರಜೆಗಳ ಸೆರೆ
ನವದೆಹಲಿ: ಕೆಂಪುಕೋಟೆಗೆ ಅಕ್ರಮವಾಗಿ ನುಗ್ಗಲೆತ್ನಿಸಿದ ಬಾಂಗ್ಲಾ ದೇಶದ ಐವರು ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಗೆ ಬಿಗಿ ಭದ್ರತೆ ಏರ್ಪಡಿಸ ಲಾಗಿದೆ. ಭದ್ರತಾ ಕ್ರಮಗಳ ನಡುವೆಯೇ ಕೆಂಪು ಕೋಟೆಯೊಳಗೆ ಅಕ್ರಮವಾಗಿ ನುಗ್ಗಲು ಐವರು ಬಾಂಗ್ಲಾ ಪ್ರಜೆಗಳು ಯತ್ನಿಸುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಅವರನ್ನು ಸೆರೆ ಹಿಡಿದಿದ್ದಾರೆ. ಬಂಧಿತರಾದ ಈ ಐವರು 20ರಿಂದ 25ರ ನಡುವಿನ ವಯೋಮಿತಿಯವರಾಗಿದ್ದಾರೆ. ಇವರು ನಾಲ್ಕು ತಿಂಗಳ ಹಿಂದೆ ಗಡಿ ಪ್ರದೇಶ ದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬಂದಿರುವುದಾಗಿ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಇವರು ಅಂದಿನಿಂದ ಭಾರತದ ಹಲವೆಡೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಸಮಗ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಇವರು ಯಾವುದಾದರೂ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದಾರೆಯೇ ಎಂದೂ, ಕೆಂಪುಕೋಟೆಯೊಳಗೆ ನುಗ್ಗಲೆತ್ನಿಸಿದ ಅವರ ಉದ್ದೇಶದ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ದಿಲ್ಲಿಯ ಉತ್ತರ ಜಿಲ್ಲೆಯ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜುಲೈ ೧೫ರಿಂದ ಮುಚ್ಚಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಇದರಂತೆ ಕೆಂಪುಕೋಟೆ ಮತ್ತು ಪರಿಸರದಲ್ಲಿ ಭದ್ರತಾ ಪಡೆಗಳು ಕವಾಯತುಗಳನ್ನು ಆರಂಭಿಸಿದ್ದಾರೆ.
ಈ ಕವಾಯತಿನಂತೆ ಕೆಂಪುಕೋಟೆಯೊಳಗೆ ಇರಿಸಲಾಗಿದ್ದ ‘ಡಮ್ಮಿ ಬಾಂಬ್’ ಪತ್ತೆಹಚ್ಚುವಲ್ಲಿ ವಿಫಲಗೊಂಡ ೭ ಪೊಲೀಸ್ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.