ನಾಡೋಜ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಕನ್ನಡ ಭವನ ಶೀಘ್ರ ಲೋಕಾರ್ಪಣೆ- ಸೋಮಣ್ಣ ಬೇವಿನಮರದ

ಕಯ್ಯಾರು: ಬದಿಯಡ್ಕದ ಡಾ. ಕಯ್ಯಾರ ಕಿಂಞಣ್ಣ ರೈ ಕನ್ನಡ ಭವನ ವನ್ನು ಶೀಘ್ರದಲ್ಲೇ ಕರ್ನಾಟಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ ನಡೆಸುವರು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್‌ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕಯ್ಯಾರು, ಕಯ್ಯಾರು 16ನೇ ವಾರ್ಡ್ ಕುಟುಂಬಶ್ರೀ ಘಟಕಗಳ ಸಹಯೋಗದಲ್ಲಿ ನಿನ್ನೆ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈಗಳ 110ನೇ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಯತ್ನಿಸುತ್ತಿದೆ. ಕನ್ನಡಿಗರ ಭಾವನೆಗಳಿಗೆ ನಿರಂತರ ಸ್ಪಂದಿ ಸುತ್ತಿದೆ.  ಜಿಲ್ಲೆಯ ವಿವಿಧ ಕಡೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಾಸರಗೋಡಿನ ವಿಲೀನಕ್ಕಾಗಿ ಜೀವಮಾನವಿಡೀ ಹೋರಾಟ ನಡೆಸಿದ ಕಯ್ಯಾರರ ಕೃತಿಗಳು ಮರೆಯಾಗುವ ಆತಂಕವಿದ್ದು, ಅದನ್ನು ಎಲ್ಲರ ಸಹಕಾರದಿಂದ ಪ್ರಾಧಿಕಾರ ಮರು ಪ್ರಕಟಣೆಗೆ ಮುಂದಾಗಲಿದೆ ಎಂದರು.

ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಇಲ್ಲಿನ ಕನ್ನಡಿಗರ ಸಮಸ್ಯೆಯನ್ನು ಪ್ರಾಧಿಕಾರದ ಗಮನಕ್ಕೆ ತರುತ್ತಿದ್ದು, ಅದನ್ನು ಉನ್ನತಮಟ್ಟದ ಅಧಿಕಾರಿಗಳಿಗೆ ತಿಳಿಸುವ ಪ್ರಯತ್ನ ಪ್ರಾಧಿಕಾರ ನಡೆಸುತ್ತಿದೆ ಎಂದರು. ಹೊರ ರಾಜ್ಯಗಳಲ್ಲಿ ಕಲಿತ ಮಕ್ಕಳಿಗೂ ಕರ್ನಾಟಕದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಪ್ರಾಧಿಕಾರ ಮಾಡಿದೆ ಎಂದು ಸೋಮಣ್ಣ ಬೇವಿನಮರದ ನುಡಿದರು.

ಶಾಸಕ ಎ.ಕೆ.ಎಂ. ಅಶ್ರಫ್ ಚೆಂಡೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ, ಕವಿ ಕಯ್ಯಾರರು ಕನ್ನಡ ನಾಡು-ನುಡಿ-ಸಂಸ್ಕೃತಿಯ ಬದ್ಧತೆಯೊಂದಿಗೆ ಹೋರಾಟಗಾರರಾಗಿ ಮಾನವೀಯತೆ ಸಂದೇಶ ಸಾರಿದ್ದಾರೆ. ಕಯ್ಯಾರರು ಹಾಗೂ ಗೋವಿಂದ ಪೈಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು. ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್‌ರಿಗೆ ಕಯ್ಯಾರ ಪ್ರಶಸ್ತಿ ಇದೇ ವೇಳೆ ಪ್ರಧಾನಿಸಲಾಯಿತು. ಕೊಂಕಣಿ ಗಾಯಕ ಜೋಸೆಫ್ ಮಾಥಿಯಾಸ್ ರನ್ನು ಗೌರವಿಸಲಾಯಿತು. ಕಲ್ಕೂರ ಫೌಂಡೇಶನ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಪ್ರಸ್ತಾಪಿಸಿದರು. ಅವರು ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡಕ್ಕೂ ಪ್ರಾಮುಖ್ಯತೆ ನೀಡಲು ಜಿಲ್ಲಾಧಿಕಾರಿಗೆ ಪ್ರಾಧಿಕಾರ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.

ಕವಿ ಮೊಹಮ್ಮದ್ ಬಡ್ಡೂರು ಸಂಸ್ಮರಣ ಭಾಷಣ ಮಾಡಿದರು. ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಕಾರ್ಯದರ್ಶಿ ಮಂಜುನಾಥ ಆಳ್ವ ಮಡ್ವ, ಎ.ಆರ್. ಸುಬ್ಬಯ್ಯಕಟ್ಟೆ, ಶಿವರೆಡ್ಡಿ ಕ್ಯಾಡೇದ್, ಕ.ಸಾ.ಪ. ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ, ಮಂಜೇಶ್ವರ ಬ್ಲೋಕ್ ಪಂ. ಸದಸ್ಯೆ ಫಾತಿಮತ್ ಝುಹರಾ ಉಪಸ್ಥಿತರಿದ್ದರು. ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಸ್ವಾಗತಿಸಿ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ನಿರೂಪಿಸಿದರು.

RELATED NEWS

You cannot copy contents of this page