ಪಾಕ್ ಮೇಲೆ ಮತ್ತೆ ‘ಆಪರೇಶನ್ ಸಿಂದೂರ-2’ ದಾಳಿಗೆ ಸಿದ್ಧತೆ: ಮಹತ್ವದ ಸರ್ವಪಕ್ಷ ಸಭೆ ಆರಂಭ
ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆಗಳಿಗೆ ಆಪರೇಶನ್ ಸಿಂಧೂರ್ ದಾಳಿ ನಡೆಸಿ ಅದು ಇಡೀ ಪಾಕಿಸ್ತಾನವನ್ನು ನಡುಗಿಸಿದ ಬೆನ್ನಲ್ಲೇ ಮತ್ತೆ ಆಪರೇಶನ್ ಸಿಂಧೂರ್-2 ದಾಳಿಗೆ ಭಾರತ ಅಗತ್ಯದ ಸಿದ್ಧತೆಯಲ್ಲಿ ತೊಡಗಿದೆ. ಇದರ ಪೂರ್ವ ಸೂಚಕವಾಗಿ ‘ಪಿಕ್ಚರ್ ಅಬೀ ಬಾಕಿ ಹೈ’ ಎಂಬ ಹೇಳಿಕೆಯನ್ನು ಭಾರತೀಯ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಣೆ ಈಗಾಗಲೇ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ವಿಚಾರ ಮತ್ತು ದೇಶದ ರಕ್ಷಣೆಯ ವಿಚಾರದಲ್ಲಿ ಸರಕಾರ ಕೈಗೊಂಡ ಕ್ರಮಗಳ ಕುರಿತಾಗಿ ರಾಜಕೀಯ ನಾಯಕರಿಗೆ ಮಾಹಿತಿ ನೀಡುವ ಸರ್ವ ಪಕ್ಷ ಸಭೆ ದಿಲ್ಲಿಯಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ, ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜುಜಿ ಸರ್ವಪಕ್ಷ ಸಭೆಯ ನೇತೃತ್ವ ವಹಿಸುತ್ತಿದ್ದಾರೆ. ಹೆಚ್ಚಿನ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಅನುಸರಿಸಬೇಕಾಗಿರುವ ತಂತ್ರಗಾರಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸ ಲಾಗುತ್ತಿದೆ. ಅತ್ತ ಕಾಶ್ಮೀರ ಬಳಿಯ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ಭಾರೀ ಶೆಲ್ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಭಾರತೀಯ ಸೇನೆಯ 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾಗಿದ್ದಾರೆ. ನಿಯಂತ್ರಣ ರೇಖೆಯುದ್ಧಕ್ಕೂ ಪಾಕಿಸ್ತಾನ ಭಾರತದ ಅಪ್ರಚೋದಿತ ಶೆಲ್ ದಾಳಿ ಮುಂದುವರಿಸುತ್ತಿದ್ದು, ಅದರಲ್ಲಿ 12 ಭಾರತೀಯ ಪ್ರಜೆಗಳು ಸಾವನ್ನಪ್ಪಿ ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತ ನಡೆಸುತ್ತಿರುವ ದಾಳಿಯಲ್ಲ ಪಾಕಿಸ್ತಾನದಲ್ಲೂ ಅಪಾರ ಸಾವುನೋವು ನಡೆದಿರುವ ಮಾಹಿತಿಯೂ ಲಭಿಸಿದೆ. ಆದರೆ ಪಾಕಿಸ್ತಾನ ಅದನ್ನು ಬಹಿರಂಗಪಡಿಸದೆ ಗೌಪ್ಯವಾಗಿರಿಸಿದೆ.