ಬಿಜೆಪಿ ನೇತಾರನ ಮನೆಗೆ ಅಬಕಾರಿ ದಾಳಿ ಹಿಂದೆ ಮುಸ್ಲಿಂ ಲೀಗ್‌ನ ಒತ್ತಾಸೆ-ಬಿಜೆಪಿ
ಕುಂಬಳೆ: ಬಿಜೆಪಿ ನೇತಾರನ ಮನೆಗೆ ಅಬಕಾರಿ ಅಧಿಕಾರಿಗಳು ಅತಿಕ್ರಮಿಸಿ ನುಗ್ಗಿ ದಾಳಿ ನಡೆಸಿದ್ದು, ಇದರ ಹಿಂದೆ ಮುಸ್ಲಿಂ ಲೀಗ್ ಸಂಚು ಹೂಡಿದೆ ಎಂದು ದೂರಲಾಗಿದೆ.
ಬಿಜೆಪಿ ಕುಂಬಳೆ ನೋರ್ತ್ ಏರಿಯಾ ಕಮಿಟಿ ಅಧ್ಯಕ್ಷ ಬಂಬ್ರಾಣದ ಪ್ರದೀಪ್‌ರ ಮನೆಗೆ ಮೊನ್ನೆ ಮಧ್ಯರಾತ್ರಿ ವೇಳೆ ಕಾಸರಗೋಡು ಅಬಕಾರಿ ದಳ ದಾಳಿ ನಡೆಸಿದೆ. ಮನೆಯಲ್ಲಿ ಮಾದಕವಸ್ತು ಬಚ್ಚಿಡಲಾಗಿದೆ ಎಂಬ ಸುಳ್ಳು ಮಾಹಿತಿಯ ಮೇರೆಗೆ ಅಬಕಾರಿ ಅಧಿಕಾರಿಗಳು ತಲುಪಿದ್ದಾರೆನ್ನಲಾಗಿದೆ.
ಮನೆಯೊಳಗೆ ನುಗ್ಗಿದ ಅಬಕಾರಿ ತಂಡ ಮನೆಯವರ ಮೇಲೆ ಬಲಪ್ರಯೋಗಿಸಿ ತಪಾಸಣೆ ಹೆಸರಲ್ಲಿ ಬೆಲೆಬಾಳುವ ಗೃಹೋಪಕರಣಗಳನ್ನು ನಾಶಗೊಳಿಸಿರುವುದಾಗಿ ಪ್ರದೀಪ್ ಆರೋಪಿಸಿದ್ದಾರೆ. ಪ್ರದೀಪ್ ಬಂಬ್ರಾಣದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಘಟನೆ ಕುರಿತು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಬಕಾರಿ ಸಚಿವರಿಗೆ ದೂರು ನೀಡುವುದಾಗಿ ಪ್ರದೀಪ್ ಹೇಳಿದ್ದಾರೆ.
ಮುಸ್ಲಿಂ ಲೀಗ್ ಹಾಗೂ ಗಾಂಜಾ ಮಾಫಿಯಾಗಳ ಒತ್ತಾಸೆಯಿಂದ ಅಬಕಾರಿ ತಂಡ ಮನೆಗೆ ನುಗ್ಗಿ ದಾಂಧಲೆ ನಡೆಸಿದೆಯೆಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಆರೋಪಿಸಿದೆ. ತಪಾಸಣೆ ವೇಳೆ ಏನನ್ನೂ ಪತ್ತೆಹಚ್ಚಲಾಗದ ಅಬಕಾರಿ ತಂಡ ಮುಸ್ಲಿಂ ಲೀಗ್‌ನ ಬೊಂಬೆಯಂತೆ ವರ್ತಿಸುತ್ತಿದೆ. ಸಾಮಾಜಿಕ ಕಾರ್ಯಕರ್ತನಾದ ಪ್ರದೀಪ್‌ರನ್ನು ಸುಮ್ಮನೆ ಕೇಸಿನಲ್ಲಿ ಸಿಲುಕಿಸಲು ಮಾದಕವಸ್ತುಗಳೊಂ ದಿಗೆ ಅಬಕಾರಿ ತಂಡ ತಲುಪಿದೆ. ಆದರೆ ಸಮಯೋಚಿತವಾಗಿ ವರ್ತಿಸಿದುದರಿಂದ ಅವರು ಪಾರಾಗಿದ್ದಾರೆಂದು ಬಿಜೆಪಿ ನೇತಾರರು ತಿಳಿಸಿದ್ದಾರೆ.
ದಂಡೆಗೋಳಿಯಲ್ಲಿ ಶಾಸಕರ ಫಂಡ್ ಬಳಸಿ ಸ್ಥಾಪಿಸುವ ಕಟ್ಟಡವೊಂದರ ಹೆಸರಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿ ಪ್ರದೀಪ್ ರಂಗಕ್ಕಿಳಿಸಿದ್ದರು. ಮಾತ್ರವಲ್ಲದೆ ಪಂಚಾಯತ್‌ನಲ್ಲಿ ಮುಸ್ಲಿಂ ಲೀಗ್ ನಡೆಸುವ ಭ್ರಷ್ಟಾಚಾರಗಳ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ ದ್ವೇಷವೇ ಅಬಕಾರಿ ದಾಳಿಯ ಹಿಂದಿದೆ. ತಪ್ಪು ಮಾಹಿತಿ ನೀಡಿದ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಅವರ ವಿರುದ್ಧ ಕೇಸು ದಾಖಲಿಸಲು ಪೊಲೀಸರು ಸಿದ್ಧವಾಗ ಬೇಕು. ಅಬಕಾರಿ ಅಧಿಕಾರಿಗಳು ನಡೆಸಿದ ಅತಿಕ್ರಮಣದ ವಿರುದ್ಧ ಬಿಜೆಪಿ ಕುಂಬಳೆ ಮಂಡಲ ಸಮಿತಿ ನೇತೃತ್ವದಲ್ಲಿ ತೀವ್ರ ಪ್ರತಿಭಟನಾ ಕಾರ್ಯಕ್ರಮ ನಡೆಸುವುದಾಗಿ ಬಿಜೆಪಿ ತಿಳಿಸಿದೆ.