ಮಂಗಳೂರಿನಲ್ಲಿ ವ್ಯಾಪಕ ಚಿನ್ನ ಬೇಟೆ: ಒಂದು ವಾರದೊಳಗೆ ಕಾಸರಗೋಡು ನಿವಾಸಿ ಸಹಿತ ನಾಲ್ವರ ಸೆರೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಅನಧಿಕೃತವಾಗಿ ಚಿನ್ನ ಸಾಗಾಟ ತೀವ್ರಗೊಂಡಿದೆ. ಒಂದು ವಾರದೊಳಗೆ ನಾಲ್ಕು ಮಂದಿಯನ್ನು ಚಿನ್ನ ಸಹಿತ ಸೆರೆಹಿಡಿಯಲಾಗಿದೆ. ಹೀಗೆ ಚಿನ್ನ ಸಾಗಾಟ ನಡೆಸುವವರಲ್ಲಿ ಕೇರಳೀಯರು ಒಳಗೊಂಡಿದ್ದಾರೆ.  ಅನಧಿಕೃತವಾಗಿ ವಿದೇಶಗಳಿಂದ ಚಿನ್ನ ಸಾಗಾಟ ನಡೆಸುವವರ ವಿರುದ್ಧ ಕಸ್ಟಮ್ಸ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

ನವಂಬರ್ ೫ರಂದು ದುಬಾಯಿಂದ ಆಗಮಿಸಿದ ಕಾಸರಗೋಡು ಬಳಿಯ ಪಳ್ಳಿಕ್ಕೆರೆ ನಿವಾಸಿಯಾದ ಹಂಸ ಎಂಬಾತನ ಕೈಯಿಂದ ೪೨೦ ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತನ ಟ್ರಾಲಿ ಬ್ಯಾಗ್‌ನ್ನು ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ. ಚಾಕ್ಲೇಟ್ ಪ್ಯಾಕ್‌ನೊಳಗೆ ಚಿನ್ನವನ್ನು ಹುಡಿ ರೂಪದಲ್ಲಿ ಸಾಗಿಸಲು ಪ್ರಯಾಣಿಕ ಯತ್ನಿಸಿದ್ದಾನೆ. ಒಟ್ಟು ೭ ಚಾಕ್ಲೇಟ್ ಪ್ಯಾಕೇಟ್‌ಗಳಲ್ಲಿ ಚಿನ್ನವನ್ನು ಸಾಗಿಸಲಾಗಿದೆ. ಇದೇ ರೀತಿ  ಕಸ್ಟಮ್ಸ್ ತಂಡ ಇಂದು ಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ೧೧,೮೩,೫೧೮ ರೂ. ಮೌಲ್ಯದ ೨೧೭ ಗ್ರಾಂ ಚಿನ್ನವನ್ನು ಪತ್ತೆಹಚ್ಚಿ ವಶಪಡಿಸಿದೆ. ವಿಮಾನದಲ್ಲಿ ದುಬಾಯಿಂದ ಬಂದ ಉತ್ತರಕನ್ನಡ ಹೊನ್ನಾವರದ ಮುಹಮ್ಮದ್ ಮುಸಾಫಿರ್ ಫಕ್ಕಿ (೫೨) ಎಂಬಾತನಿಂದ ಈ ಚಿನ್ನವನ್ನು ವಶಪಡಿಸಲಾಗಿದೆ. ಚಿನ್ನವನ್ನು ಟ್ರಾಲಿ ಬ್ಯಾಗ್‌ನೊಳಗೆ ಬಚ್ಚಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ ೩೧ರಿಂದ  ನವಂಬರ್ ೨ರ ವರೆಗಿನ ದಿನಗಳಲ್ಲಿ ದುಬಾಯಿಂದ ಬಂದ ಮತ್ತಿಬ್ಬರಿಂದ ೨೮೮ ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ. ಒಳ ಉಡುಪು, ಸಾಕ್ಸ್, ಪ್ಯಾಂಟ್‌ನ ಲೂಪ್‌ನಲ್ಲಿ ಚಿನ್ನವನ್ನು ಪೇಸ್ಟ್ ಹಾಗೂ ಸರದ ರೂಪದಲ್ಲಿ ಸಾಗಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page