ಯುವಕನನ್ನು ಕಾರಿನಲ್ಲಿ ಅಪಹರಿಸಿ 33,000 ರೂ. ಲಪಟಾವಣೆ
ಕಾಸರಗೋಡು: ರಾತ್ರಿ ವೇಳೆ ಯುವಕನನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿ 33,000 ರೂ. ಎಗರಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಮಧೂರಿಗೆ ಸಮೀಪದ ಚೇನಕ್ಕೋಡು ನಿವಾಸಿ ಶೈಲೇಶ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಕಾಸರಗೋಡು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಶನಿವಾರ ರಾತ್ರಿ ತಾನು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಬಟ್ಟಂಪಾರೆ ತಲುಪಿದಾಗ ಅದರ ಪೆಟ್ರೋಲ್ ಮುಗಿದ ಕಾರಣ ಸ್ಕೂಟರ್ ಅಲ್ಲೇ ನಿಲ್ಲಿಸಿ ಕಾಯುತ್ತಿದ್ದ ವೇಳೆ ಆ ದಾರಿಯಾಗಿ ಕಾರಿನಲ್ಲಿ ಬಂದ ನಾಲ್ವರ ತಂಡ ‘ನೀನು ಇಲ್ಲಿ ಯಾಕೆ ನಿಂತಿದ್ದೀಯ’? ಎಂದು ಕೇಳಿದಾಗ ಸ್ಕೂಟರ್‌ನಲ್ಲಿ ಪೆಟ್ರೋಲ್ ಮುಗಿದಿದೆ ಎಂದು ತಾನು ಹೇಳಿದೆನೆಂದೂ, ಆಗ ಆ ತಂಡದವರು ತನ್ನನ್ನು ಬಲವಂತವಾಗಿ ಕಾರಿಗೇರಿಸಿ ಅಪಹರಿಸಿ ಪಟ್ಲಕ್ಕೆ ಕರೆದೊಯ್ದು ಹಣ ನೀಡುವಂತೆ ಬೆದರಿಸಿದರೆಂದೂ, ಅವರ ಬೆದರಿಕೆಗೆ ಮಣಿದು ತಾನು ಗೂಗಲ್ ಪೇ ಮೂಲಕ 30,000 ರೂ. ಅವರಿಗೆ ನೀಡಿದೆ. ಮಾತ್ರವಲ್ಲ ತನ್ನ ಕೈಯಲ್ಲಿದ್ದ 3000 ರೂ. ನಗದನ್ನೂ ಆ ತಂಡ ಕಸಿದುಕೊಂಡಿದೆ. ಆ ಬಳಿಕವಷ್ಟೇ ಅವರು ತನ್ನನ್ನು ಬಿಡುಗಡೆಗೊಳಿಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶೈಲೇಶ್ ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಅಪಹರಣ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ.