ರಾಜ್ಯದಲ್ಲಿ ಮತ್ತೆ ನಿಫಾ ಸೋಂಕು: ಪಾಲಕ್ಕಾಡ್‌ನ ಯುವತಿ ಆಸ್ಪತ್ರೆಯಲ್ಲಿ
ಪಾಲಕ್ಕಾಡ್: ರಾಜ್ಯದಲ್ಲಿ ಮತ್ತೆ ನಿಫಾ ದೃಢೀಕರಿಸಲಾಗಿದೆ. ಪಾಲಕ್ಕಾಡ್‌ನ ಮಣ್ಣಾರ್‌ಕಾಡ್ ನಾಟ್ಟುಕಲ್ ನಿವಾಸಿಯಾದ 38ರ ಹರೆಯದ ಯುವತಿಗೆ ನಿಫಾ ಸೋಂಕು ಕಂಡುಬಂದಿದೆ. ಯುವತಿಯನ್ನು ಪೆರಿಂದಲ್‌ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ತಪಾಸಣೆಗಾಗಿ ಸ್ಯಾಂಪಲ್ ಪುಣೆಯ ವೈರೋಲಜಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಯುವತಿಗೆ ರೋಗ ಸೋಂಕು ಎಲ್ಲಿಂದ ತಗಲಿದೆ ಎಂದು ತಿಳಿದು ಬಂದಿಲ್ಲ. ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಯೆಂದೂ ಹೇಳಲಾಗುತ್ತಿದೆ. ಇದೇ ವೇಳೆ ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಮಲಪ್ಪುರಂ ಮಂಕಡ ನಿವಾಸಿಯಾದ 17ರ ಹರೆಯದ ಬಾಲಕಿಗೆ ನಿಫಾ ಬಾಧಿಸಿತ್ತೆಂದು ಸಂಶಯಿಸಲಾಗಿದೆ. ಈಕೆಯ ಮೃತದೇಹದ ಮರಣೋತ್ತರ ಪರೀಕ್ಷೆ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾ ಗಿತ್ತು. ಈಕೆಯ ಸ್ಯಾಂಪಲ್ ಕೂಡಾ ಪುಣೆಯ ಎನ್‌ಐವಿಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹಾಗೂ ನೌಕರರು ಕ್ವಾರಂಟೈನ್‌ನಲ್ಲಿದ್ದಾರೆ. ಈ ತಿಂಗಳ 1ರಂದು ಬಾಲಕಿ ಮೆದುಳಿನ ಆಘಾತದಿಂದ ಮೃತಪಟ್ಟಿದ್ದಳು.