ಹೊಸದಿಲ್ಲಿ: ಬಂಗಾಲ ಆಳ ಸಮುದ್ರದಲ್ಲಿ ಸೃಷ್ಟಿಯಾದ ರೀಮಲ್ ಚಂಡಮಾರುತ ನಾಳೆವರೆಗೆ ವಿವಿಧೆಡೆ ಬೀಸಲಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರು ತದಿಂದ ಪಶ್ಚಿಮಬಂಗಾಲ ಕರಾವಳಿಯಲ್ಲಿ ಈಗಾಗಲೇ ವ್ಯಾಪಕ ನಾಶನಷ್ಟ ಸಂಭವಿಸಿದೆ. ಹಲವು ಮನೆಗಳು ಕುಸಿದುಬಿದ್ದಿವೆ.
ಕರಾವಳಿ ಪ್ರದೇಶದಲ್ಲಿ ಭಾರೀ ನೆರೆಯುಂಟಾಗಿದೆ. ಪಶ್ಚಿಮಬಂಗಾಲದಲ್ಲಿ ಒಂದು ಲಕ್ಷದಷ್ಟು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ.
ಇದೇ ವೇಳೆ ಕೇರಳದಲ್ಲಿ ಮಧ್ಯಾಹ್ನ 2.30 ರಾತ್ರಿ 11.30ರ ವರೆಗೆ 2.4 ಮೀಟರ್ ಎತ್ತರದಲ್ಲಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ತಮಿಳುನಾಡಿನಲ್ಲೂ ಭಾರೀ ಕಡಲ್ಕೊರೆತವುಂಟಾಗಲಿದೆಯೆಂದು ತಿಳಿಸಲಾಗಿದೆ.
ಚಂಡಮಾರುತದ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ಸಚಿವ ಸಂಪುಟ ವಿಶೇಷ ಸಭೆ ನಡೆದು ಸ್ಥಿತಿಗತಿಗಳ ಅವಲೋಕನ ನಡೆಸಲಾಯಿತು.
ಜನರು ಮನೆಗಳಿಂದ ಹೊರಗಿಳಿಯಕೂಡದೆಂದು ಪಶ್ಚಿಮಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲಿನ ಜನರಿಗೆ ಕರೆ ನೀಡಿದ್ದಾರೆ.