ವಿದ್ಯಾನಗರ-ಉಳಿಯತ್ತಡ್ಕ ರಸ್ತೆಯಲ್ಲಿದ್ದ ಬೀದಿ ಬದಿ ಗೂಡಂಗಡಿಗಳನ್ನು ಆಂಶಿಕವಾಗಿ ತೆರವು
ವಿದ್ಯಾನಗರ: ಜನದಟ್ಟಣೆ ಇರುವ ರಸ್ತೆಗೆ ಹೊಂದಿಕೊಂಡು ಅಪಾಯಕರವಾದ ರೀತಿಯಲ್ಲಿದ್ದ ಗೂಡಂಗಡಿಗಳನ್ನು ಆಂಶಿಕವಾಗಿ ತೆರವುಗೊಳಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ವಿದ್ಯಾನಗರದಿಂದ ಉಳಿಯತ್ತಡ್ಕವರೆಗಿರುವ ರಸ್ತೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸಮೀಪವಿದ್ದ ಬೀದಿ ಬದಿ ಅಂಗಡಿಗಳನ್ನು ಪೊಲೀಸರು ತೆರವುಗೊಳಿಸಿದರು. ಅಪಾಯಕರ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದ ಬೀದಿ ಬದಿ ವ್ಯಾಪಾರದ ಬಗ್ಗೆ ಈ ಮೊದಲು ದೂರು ಉಂಟಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಅವರ ನಿರ್ದೇಶದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ರಸ್ತೆ ಹಾಗೂ ಚರಂಡಿ ಮಧ್ಯೆ ಇರುವ ಸ್ಥಳದಲ್ಲಿ ಗೂಡಂಗಡಿಗಳು ಕಾರ್ಯಾಚರಿಸುತ್ತಿತ್ತು. ಕಾಸರಗೋಡು ಸರಕಾರಿ ಕಾಲೇಜು ಮೈದಾನದ ಆವರಣಗೋಡೆಗೂ ಚರಂಡಿಗೂ ಮಧ್ಯೆ ಇರುವ ಸ್ಥಳದಲ್ಲಿ ಇದ್ದ ಗೂಡಂಗಡಿಗಳನ್ನು ಕೂಡಾ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಂತೆ ಸಂಚಾರತಡೆಯನ್ನು ಹೊರತುಪಡಿಸುವುದಕ್ಕಾಗಿ ಮಂಗಳೂರಿನಿಂದ ಚೆರ್ಕಳ ಭಾಗಕ್ಕೆ ತೆರಳುವ ವಾಹನಗಳು ಕುಂಬಳೆಯಿಂದ ಸೀತಾಂಗೋಳಿ- ಉಳಿಯತ್ತಡ್ಕ ದಾರಿಯಾಗಿ ವಿದ್ಯಾನಗರಕ್ಕೆ ತಲುಪುತ್ತಿದೆ. ಇತ್ತೀಚೆಗಿನಿಂದ ವಿದ್ಯಾನಗರ- ಸೀತಾಂಗೋಳಿ ರಸ್ತೆ, ಕುಂಬಳೆ- ಸೀತಾಂಗೋಳಿ- ಬದಿಯಡ್ಕ ರಸ್ತೆಯನ್ನು ಅಗಲಗೊಳಿಸಿ ನವೀಕರಿಸಿದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ.