ಸುಡುಮದ್ದು ದುರಂತ: ಮೃತಪಟ್ಟವರ ಸಂಖ್ಯೆ 4ಕ್ಕೆ
ಹೊಸದುರ್ಗ: ನೀಲೇಶ್ವರ ಅಂಞೂಟಂಬಲ ಕ್ಷೇತ್ರದಲ್ಲಿ ದೈವಗಳ ಕಳಿಯಾಟ ನಡೆಯುತ್ತಿದ್ದಂತೆ ಉಂಟಾದ ಸುಡುಮದ್ದು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಗಂಭೀರ ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ತುರುತ್ತಿ ಓರ್ಕಳದ ಶಿಬಿನ್‌ರಾಜ್ (19), ಚೆರಿ ಯಂಗೋಡ್ ಕಿಣಾವೂರ್ ಮಂಞಳಂ ಕಾಟ್‌ನ ಕೊಲ್ಲಂಬಾರದ ಬಿಜು (36), ಚೊಯ್ಕಂಗೋಡ್ ಕಿಣಾವೂರ್‌ನ ರತೀಶ್ (48), ಕರಿಂದಳ ಕಿಣಾವೂರ್ ನಿವಾಸಿ ಆಟೋಚಾಲಕ ಸಂದೀಪ್ (38) ಎಂಬಿವರು ಮೃತಪಟ್ಟ ದುರ್ದೈವಿ ಗಳಾಗಿದ್ದಾರೆ. ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂದೀಪ್ ಶನಿವಾರ ಸಂಜೆ ಮೃತಪಟ್ಟಿದ್ದರು. ಕಲ್ಲಿಕೋಟೆಯ ಆಸ್ಪತ್ರೆಯಲ್ಲಿದ್ದ ರತೀಶ್ ನಿನ್ನೆ ಬೆಳಿಗ್ಗೆ ಕಲ್ಲಿಕೋಟೆಯಲ್ಲಿ ಚಿಕಿತ್ಸೆಯಲ್ಲ್ಲಿದ್ದ ಬಿಜು ಹಾಗೂ ಶಿಬಿನ್ ರಾಜು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಅಕ್ಟೋಬರ್ 28ರಂದು ರಾತ್ರಿ 12 ಗಂಟೆ ವೇಳೆ ನೀಲೇಶ್ವರ ಅಂಞಾಟಂಬಲ ಶ್ರೀ ವೀರರ್‌ಕಾವ್ ಕ್ಷೇತ್ರದಲ್ಲಿ ಈ ದುರಂತ ಉಂಟಾಗಿತ್ತು. ಶ್ರೀ ಮೂವಾಳಂಕುಳಿ ಚಾಮುಂಡಿ ದೈವದ ವೆಳ್ಳಾಟಂ ನಡೆಯುತ್ತಿದ್ದ ವೇಳೆ ಪಟಾಕಿ ಸಿಡಿಸುತ್ತಿದ್ದಾಗ ಅದರಿಂದ ಬೆಂಕಿ ಪಟಾಕಿ ದಾಸ್ತಾನಿರಿಸಿದ್ದ ಶೆಡ್‌ನ ಮೇಲೆ ಬಿದ್ದಿದ್ದು, ಈ ವೇಳೆ ಪಟಾಕಿ ಪೂರ್ಣವಾಗಿ ಸ್ಫೋಟಗೊಂಡು ಈ ದುರಂತವುಂಟಾಗಿತ್ತು. ದುರಂತದಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರು ಚಿಕಿತ್ಸೆಯಲ್ಲಿದ್ದಾರೆ.