ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಭಜಿಸಿ ಹೊಸ ಪಂಚಾಯತ್, ನಗರಸಭೆ, ಮಹಾನಗರಪಾಲಿಕೆ ರೂಪೀಕರಿಸಲು ಶಿಫಾರಸು

ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳನ್ನು ವಿಭಜಿಸಿ ಹೊಸ ಗ್ರಾಮ ಪಂಚಾಯತ್, ನಗರಸಭೆ ಹಾಗೂ ಮಹಾ ನಗರಪಾಲಿಕೆ (ಕಾರ್ಪರೇಷನ್)ಗಳಿಗೆ ರೂಪು ನೀಡುವಂತೆ ವಾರ್ಡ್ ವಿಭಜನೆ ಸಂಬಂಧಿಸಿ ಅಧ್ಯಯನ ನಡೆಸಿದ ಉನ್ನತ ಅಧಿಕಾರಿಗಳ ಸಮಿತಿ  ಸರಕಾರಕ್ಕೆ ಶಿಫಾರಸು ಮಾಡಿದೆ.

ಈ ಶಿಫಾರಸ್ಸನ್ನು ಸರಕಾರ ಅಂಗೀಕರಿಸಿದ್ದಲ್ಲಿ, ರಾಜ್ಯದಲ್ಲಿ ಈಗಿರುವ ೯೪೧ ಗ್ರಾಮ ಪಂಚಾಯತ್‌ಗಳು, ೮೭ ನಗರಸಭೆಗಳು ಮತ್ತು ೬ ಮಹಾನಗರ ಪಾಲಿಕೆಗಳ ಸಂಖ್ಯೆ ಮುಂದೆ ಹೆಚ್ಚಾಗಲಿದೆ.

ಇದರ ಜತೆಗೆ ಜಿಲ್ಲಾ ಪಂಚಾಯತ್‌ಗಳ ವಾರ್ಡ್ ವಿಭಜನೆಯನ್ನೂ ನಡೆಸಬೇಕು. ಆದರೆ ಹೊಸ ಬ್ಲೋಕ್ ಪಂಚಾಯತ್ ಗಳನ್ನು ರೂಪೀಕರಿಸುವ ಮತ್ತು ಅವುಗಳ ವಾರ್ಡ್ ವಿಭಜನೆ ನಡೆಸುವ ಅಗತ್ಯವಿಲ್ಲವೆಂದೂ ಸರಕಾರಕ್ಕೆ ಸಲ್ಲಿಸಲಾದ ಶಿಫಾರಸ್ಸಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಆಲಪ್ಪುಳ, ಕೋಟ್ಟಯಂ, ಪಾಲ್ಘಾಟ್ ಇತ್ಯಾದಿ ನಗರಸಭೆಗಳು ಮಹಾನಗರ ಪಾಲಿಕೆಯಾಗಿ ಭಡ್ತಿಗೊಳಿಸಲು ಯೋಗ್ಯವಾಗಿದೆ. ಕಾಸರಗೋಡು ನಗರಸಭೆ ಮತ್ತು ಹೊಸದುರ್ಗ ನಗರಸಭೆಗಳಿಗೆ ಭಡ್ತಿ ನೀಡಿ ಮಹಾನಗರಪಾಲಿಕೆಗಳ ನ್ನಾಗಿಸುವ ವಿಷಯ ಈ ಹಿಂದೆ ಸರಕಾರದ ಪರಿಗಣನೆಯ ಲ್ಲಿತ್ತಾದರೂ, ಸರಕಾರಕ್ಕೆ ಸಮಿತಿ ಸಲ್ಲಿಸಿರುವ ಈ ವರದಿಯಲ್ಲಿ ಆ ಕುರಿತಾದ ಯಾವುದೇ ರೀತಿಯ ಉಲ್ಲೇಖವಿಲ್ಲ.

ಆದಾಯವಿಲ್ಲದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ನಡೆಸುವ ಅಗತ್ಯವಿಲ್ಲ. ರಾಜ್ಯದಲ್ಲಿ ೬೮ ಗ್ರಾಮ ಪಂಚಾಯತ್‌ಗಳು ಮತ್ತು ಹಲವು ನಗರಸಭೆಗಳಿಗೆ ಅವುಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಟ ವೇತನವನ್ನು ನೀಡಲು ಸಾಧ್ಯವಾಗದ ಸ್ಥಿತಿ ಇಂದಿದೆ. ಅಂತಹ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಯಥಾ ಸ್ಥಿತಿ ಮುಂದುವರಿಸು ವಂತೆಯೂ ಶಿಫಾರಸು ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ೨೦೨೫ರಂದು ಚುನಾವಣೆ ನಡೆಯಲಿದ್ದು, ಅದರ ಮೊದಲು ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆಗೆ ಸಂಬಂಧಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ರಾಜ್ಯ ಸ್ಥಳೀಯಾಡಳಿತ ಇಲಾಖೆಯ ಮುಖ್ಯ ನಿರ್ದೇಶಕರು  ಅಧ್ಯಕ್ಷರಾಗಿರುವ ಉನ್ನತ ಮಟ್ಟದ ಸಮಿತಿಗೆ ಸರಕಾರ ವಹಿಸಿಕೊಟ್ಟಿತ್ತು. ರಾಜ್ಯ ಪಂಚಾಯತ್ ನಿರ್ದೇಶಕರು ಈ ಸಮಿತಿಯ ಸಂಚಾಲಕರಾಗಿದ್ದಾರೆ. ಈ ಸಮಿತಿ ಆ ಬಗ್ಗೆ ಅಧ್ಯಯನ ನಡೆಸಿ ತಯಾರಿಸಿ, ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸ್ಸು ಮಾಡಿದೆ. ೨೦೧೦ರ ಬಳಿಕ ರಾಜ್ಯದಲ್ಲಿ ಸಂಪೂರ್ಣ ವಾರ್ಡ್ ವಿಭಜನೆ ನಡೆದಿಲ್ಲ.

ಜನಸಂಖ್ಯೆ, ಆದಾಯ ಮತ್ತು ವಿಸ್ತೀರ್ಣ ಇತ್ಯಾದಿಗಳ ಆಧಾರದಲ್ಲಿ ವಾರ್ಡ್ ವಿಭಜನೆ ನಡೆಸಬೇಕಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ವಿಭಜನೆ ನಡೆಸಬೇಕೆಂದು ರಾಜ್ಯ ಚುನಾವಣಾ ಆಯೋಗ ಕೂಡಾ ಇನ್ನೊಂದೆಡೆ ಸರಕಾರದೊಡನೆ   ಆಗ್ರಹಪಟ್ಟಿದೆ.

ರಾಜ್ಯದಲ್ಲಿ ಈಗ ಒಟ್ಟಾರೆಯಾಗಿ ೯೪೧ ಗ್ರಾಮ ಪಂಚಾಯತ್‌ಗಳು, ೧೫೨ ಬ್ಲೋಕ್ (ಮಂಡಲ) ಪಂಚಾಯತ್‌ಗಳು, ೧೪ ಜಿಲ್ಲಾ ಪಂಚಾಯತ್‌ಗಳು, ೮೨ ನಗರಸಭೆಗಳು ಮತ್ತು ಆರು ಮಹಾನಗರಪಾಲಿಕೆಗಳೂ ಸೇರಿದಂತೆ ಒಟ್ಟು ೧೨೦೦ ಸ್ಥಳೀಯಾಡಳಿತ ಸಂಸ್ಥೆಗಳಿವೆ.  ಇನ್ನೂ ಅವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

You cannot copy content of this page