ಏಣಿಯರ್ಪು ಲೈಫ್ ಯೋಜನೆ: ಮೂಲಭೂತ ಸೌಕರ್ಯಗಳಿಗಾಗಿ ಪ್ರತ್ಯೇಕ ಯೋಜನೆ ಜ್ಯಾರಿಗೊಳಿಸಲು ಒತ್ತಾಯಿಸಿ ಸಿಪಿಎಂನಿಂದ ಸಚಿವರಿಗೆ ಮನವಿ

ನೀರ್ಚಾಲು: ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಣಿಯರ್ಪು ನಲ್ಲಿ ಲೈಫ್ ಯೋಜನೆಯಲ್ಲಿ  ಮನೆ ಲಭಿಸಿದ ಸ್ಥಳದಲ್ಲಿ ಪ್ರತ್ಯೇಕ ಪ್ಯಾಕೇಜ್ ಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಈ ಬೇಡಿಕೆ ಮುಂದಿರಿಸಿ ಸಿಪಿಎಂ ಲೋಕಲ್ ಕಮಿಟಿ ಸ್ಥಳೀಯಾಡಳಿತ ಖಾತೆ ಸಚಿವರಿಗೆ ಮನವಿ ಸಲ್ಲಿಸಿದೆ.

ಸರಕಾರ ಸ್ಥಳ ಹಾಗೂ ಮನೆ ನೀಡಿದ ೪೮ ಕುಟುಂಬಗಳು ವಾಸಿಸುವ ಏಣಿಯರ್ಪಿನಲ್ಲಿ ಶುದ್ಧ ನೀರು, ರಸ್ತೆ ಸಹಿತ ಮೂಲಭೂತ ಸೌಕರ್ಯಗಳು, ಇತರ ಮೂಲಭೂತ ಸೌಕರ್ಯಗಳಿಲ್ಲ. ಆದುದರಿಂದ ಈ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ತಲಾ3 ಸೆಂಟ್‌ನಂತೆ 14 ಎಕರೆ ಸ್ಥಳದಲ್ಲಿ 321 ಮಂದಿಗೆ ಸರಕಾರ ಒದಗಿಸಿ ಅವರಿಗೆ ಪಟ್ಟಾ ನೀಡಿದೆ. ನಿರ್ಮಾಣ ಹಂತದಲ್ಲಿ  ಹಾಗೂ ನಿರ್ಮಾಣ ಪೂರ್ಣಗೊಂಡ 82 ಮನೆಗಳಿವೆ. ಈ ಪೈಕಿ 48ಮನೆಗಳಲ್ಲಿ ಜನವಾಸವಿದೆ. ಇನ್ನು ಉಳಿದಿರುವ ಸ್ಥಳದ ಕುರಿತು ಪರಿಶೀಲನೆ ನಡೆಸಿ ಅರ್ಹರಿಗೆ ಮನೆ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಇದೀಗ ಕುಟುಂಬಗಳು ವಾಸ ಆರಂಭಿಸಿದ ೪೮ ಮನೆಗಳಲ್ಲಾಗಿ 252 ಮಂದಿಯಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳಾಗಿದ್ದಾರೆ. ಈ ಮನೆಗಳಿಗೆ ಆವರಣಗೋಡೆ ನಿರ್ಮಿಸಬೇಕು, ವಿದ್ಯುತ್ ಸೌಕರ್ಯಕ್ಕಾಗಿ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಬೇಕು, ಹೈಮಾಸ್ಟ್ ಲೈಟ್, ಮಿನಿ ಸ್ಟೇಡಿಯಂ, ಅಂಗನವಾಡಿ, ಗ್ರಂಥಾಲಯ ಮೊದಲಾದ ಸೌಕರ್ಯಗಳನ್ನು ಇಲ್ಲಿ ಏರ್ಪಡಿಸಬೇಕೆಂದು ಸಿಪಿಎಂ ನೀರ್ಚಾಲು ಲೋಕಲ್ ಸೆಕ್ರೆಟರಿ ಸುಬೈರ್ ಬಾಪಾಲಿಪೊನ ಇತ್ತೀಚೆಗೆ ಸಚಿವ ಎಂ.ಬಿ. ರಾಜೇಶ್‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

You cannot copy contents of this page