ಎರ್ನಾಕುಳಂ: ಕಳಮಶ್ಶೇರಿಯಲ್ಲಿ ಯಹೋವನ ವಲಯ ಸಮಾವೇಶದಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ ಸಂಭವಿಸಿದತ್ರಿವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಚೆಲವನ್ನೂರು ವೇಲಿಕಗತ್ತ್ತ್ ವೀಟಿಲ್‌ನ ಮಾರ್ಟಿನ್ ಡೊಮಿನಿಕ್ (೫೨)ನನ್ನು ಇಂದು ಎರ್ನಾಕುಳಂ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಹಾಜರುಪಡಿಸುವ ಮೊದಲು ಆರೋಪಿಯನ್ನು ಬಾಂಬ್ ಸ್ಫೋಟ ನಡೆದ ಸ್ಥಳ, ಆತನ ಮನೆ, ಅತ್ತಾಣಿಯಲ್ಲಿರುವ ಆತನ ಇನ್ನೊಂದು ಮನೆ, ಬಾಂಬ್ ನಿರ್ಮಿಸಿದ ಕೇಂದ್ರ, ಬಾಂಬ್ ನಿರ್ಮಾಣಕ್ಕಾಗಿ ಸ್ಫೋಟಕ ಸಾಮಗ್ರಿಗಳನ್ನು ಖರೀದಿಸಿದ ಸಂಸ್ಥೆ ಗಳಿಗೂ ಪೊಲೀಸರು ಒಯ್ದು ಅಲ್ಲಿಂದ ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದ್ದಾರೆ. ಮಾತ್ರವಲ್ಲ ಆತನ ಮೊಬೈಲ್ ಪೋನ್‌ಗಳನ್ನು ಫೋರೋನ್ಸಿಕ್ ಲ್ಯಾಬ್‌ನ ಸಹಾಯದಿಂದ ಪರಿಶೀಲಿಸಿ ಅದರಿಂದ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಮಾತ್ರವಲ್ಲ ಆತನ ಮೊಬೈಲ್ ಫೋನಿನ ಎಲ್ಲಾ ಕರೆಗಳನ್ನು ಪೊಲೀಸರು ಸೈಬರ್ ಸೆಲ್ ಸಹಾಯದಿಂದ ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಇನ್ನೂ ಅಧಿಕೃತವಾಗಿ ಹಸ್ತಾಂತರಿಸಿಲ್ಲ. ಆದರೆ, ಎನ್‌ಐಎ ಸ್ವಯಂ ಆಗಿ ಈ ಪ್ರಕರಣದ ತನಿಖೆ ಈಗಾಗಲೇ ಆರಂಭಿಸಿದೆ.
ಈ ಬಾಂಬ್ ಸ್ಫೋಟದಲ್ಲಿ ಓರ್ವೆ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ೧೮ ಮಂದಿಯ ಆರೋಗ್ಯ ಸ್ಥಿತಿ ಇನ್ನೂ ಗಂಭೀರ ವಾಗಿಯೇ ಮುಂದುವರಿಯುತ್ತಿದೆ. ಒಟ್ಟು ೫೨ರಷ್ಟು ಮಂದಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.
ಈ ಬಾಂಬ್ ಸ್ಫೋಟದ ಜವಾಬ್ದಾರಿಯನ್ನು ಮಾರ್ಟಿನ್ ಡೊಮಿನಿಕ್ ಸ್ವಯಂ ಆಗಿ ಹೊತ್ತುಕೊಂಡಿದ್ದರೂ, ಆ ದುಷ್ಕೃತ್ಯವನ್ನು ಆತ ಒಬ್ಬನೇ ನಡೆಸುವಂತಿಲ್ಲ. ಕಳೆದ ೧೫ ವರ್ಷಗಳಿಂದ ದುಬಾಯಿಯಲ್ಲಿ ನೆಲೆಸಿದ್ದ ಆರೋಪಿ ಮಾರ್ಟಿನ್ ಅಲ್ಲಿ ಇಲೆಕ್ಟ್ರೀಷಿಯನ್ ಆಗಿ ದುಡಿಯುತ್ತಿದ್ದ. ಅಲ್ಲಿಂದ ೨ ತಿಂಗಳ ಹಿಂದೆ ಊರಿಗೆ ಬಂದಿದ್ದ. ಆದ್ದರಿಂದ ಆತನ ದುಬಾಯಿ ನಂಟು ಬಗ್ಗೆಯೂ ಎನ್‌ಐಎ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಕೇವಲ ದಾಳ ಮಾತ್ರವಾಗಿದ್ದು, ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಬೇರೆಯೇ ಆಗಿದೆ. ಬೇರೆಯವರ ಸೂತ್ರದಾರಿಕೆಯಲ್ಲಿ ಆತ ಈ ಭೀಕರ ಬಾಂಬ್ ಸ್ಫೋಟ ನಡೆಸಿರಬಹುದೆಂಬ ಬಲವಾದ ಶಂಕೆ ಎನ್‌ಐಎಗೆ ಉಂಟಾಗಿದೆ. ಅದನ್ನು ಬೇಧಿಸುವ ಯತ್ನದಲ್ಲಿ ಎನ್‌ಐಎ ತೊಡಗಿದೆ. ಆ ಬಳಿಕವಷ್ಟೇ ಇದರ ನಿಗೂಢತೆ ಬಯಲುಗೊಳ್ಳುವ ಸಾಧ್ಯತೆ ಇದೆ.