ನವಜಾತ ಶಿಶುವನ್ನು ಕೊಲೆಗೈದ ಪ್ರಕರಣ: ತಾಯಿ ಖುಲಾಸೆ

ಕಾಸರಗೋಡು: ನವಜಾತ ಶಿಶುವನ್ನು ಕೊಲೆಗೈದ ಪ್ರಕರಣದಲ್ಲಿ ತಾಯಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

 ಬದಿಯಡ್ಕ ಸಮೀಪ ವಾಸಿಸುವ ಯುವತಿಯನ್ನು ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ. ಮನೋಜ್ ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಯುವತಿಯನ್ನು ಮಾನಸಿಕ ತಪಾಸಣೆಗೊಳಿಸಬೇಕೆಂದು ಸೈಕಾಲಜಿಸ್ಟ್ ನಿರ್ದೇಶಿಸಿದ್ದರು. ಆದರೆ ತನಿಖಾ ತಂಡ ಅದನ್ನು ನಡೆಸಿಲ್ಲವೆಂದು ಆರೋಪಿಯ ಪರ ನ್ಯಾಯವಾದಿಯ ವಾದವನ್ನು ನ್ಯಾಯಾಲಯ ಅಂಗೀಕರಿಸಿದೆ. 2020 ಡಿಸೆಂಬರ್ 15ರಂದು ಸಂಜೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಪತಿಯ ಮನೆಯಲ್ಲಿ ನವಜಾತ ಶಿಶುವನ್ನು ಕೊಲೆಗೈಯ್ಯಲಾ ಯಿತೆಂದು ಕೇಸು ದಾಖಲಿಸಲಾಗಿತ್ತು. ಮೊದಲ ಮಗುವಿಗೆ ಒಂದು ವರ್ಷವಾಗುವುದರ ಮುಂಚೆ ಯುವತಿ ಮತ್ತೆ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾದ ವಿಷಯ ತಡವಾಗಿ ತಿಳಿದುಬಂದಿತ್ತು. ಭಯದಿಂದ ಅದನ್ನು ಪತಿಗೂ ತಿಳಿಸಿರಲಿಲ್ಲ. ಮನೆಯಲ್ಲಿ ಯಾರು ತಿಳಿಯದಂತೆ ಹೆರಿಗೆ ನಡೆದಾಗ ಮಗುವಿನ ಕುತ್ತಿಗೆಗೆ ಮೊಬೈಲ್ ಫೋನ್‌ನ ಕೇಬಲ್ ಸುತ್ತಿ ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ  ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿತ್ತು. ಕೊಲೆಗೈದ ಬಳಿಕ ಮೃತದೇಹವನ್ನು ಮಂಚದ ಅಡಿಯಲ್ಲಿ  ಬಟ್ಟೆಯಲ್ಲಿ ಸುತ್ತಿಡಲಾಗಿತ್ತು. ಈ ಮಧ್ಯೆ ಯುವತಿಗೆ ರಕ್ತಸ್ರಾವವಾಗುತ್ತಿ ರುವುದನ್ನು ಕಂಡ ಮನೆಯವರು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಹೆರಿಗೆ ನಡೆದ ಬಗ್ಗೆ ತಿಳಿದುಬಂದಿತ್ತು.  ಡಿಎನ್‌ಎ  ತಪಾಸಣೆಯಲ್ಲಿ  ಮಗು ಪತಿಯ ದ್ದಾಗಿದೆಯೆಂದು ತಿಳಿದುಬಂದಿತ್ತು. ಪುನಃ ಗರ್ಭಿಣಿಯಾದುದರಿಂದ ಮನೆಯವರು ಬಯ್ಯುವರೆಂಬ ಭಯದಿಂದ ಯುವತಿ ಈ ಕೃತ್ಯ ನಡೆಸಿರುವುದಾಗಿ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿತ್ತು. ಬದಿಯಡ್ಕ ಎಸ್‌ಐ ಅನೀಶ್, ಇನ್‌ಸ್ಪೆಕ್ಟರ್ ಆಗಿದ್ದ ಉತ್ತಮ್‌ದಾಸ್, ಸಲೀಂ ಕೆ ಎಂಬಿವರು ತನಿಖೆ ನಡೆಸಿ ಆರೋಪಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. 29 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿತ್ತು.

2024 ಜನವರಿ 12ರಂದು ಆರಂಭಗೊಂಡ ಸಾಕ್ಷಿಗಳ ಹೇಳಿಕೆ ಸಂಗ್ರಹ ಅಗೋಸ್ತ್ ೮ರ ವರೆಗೆ ಮುಂದುವರಿಯಿತು. ಪ್ರೋಸಿಕ್ಯೂಶನ್ ಪರವಾಗಿ  29 ಸಾಕ್ಷಿಗಳು ಹಾಗೂ 58 ದಾಖಲೆ ಗಳನ್ನು ಹಾಜರುಪಡಿಸಲಾಗಿತ್ತು. ಆದರೆ ಆರೋಪಿ ತಪ್ಪಿತಸ್ಥಳೆಂದು ಸಾಬೀತುಪಡಿಸಲು ಪ್ರೋಸಿಕ್ಯೂಶನ್‌ಗೆ ಸಾಧ್ಯವಾಗಿಲ್ಲ. ಪುರಾವೆಯ ಅಭಾವದಿಂದ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿ ಪರವಾಗಿ ನ್ಯಾಯವಾದಿ ಶಾಫಿ ಮೈನಾಡಿ ಹಾಜರಿದ್ದರು. 

You cannot copy contents of this page