ಕಾಸರಗೋಡು: ಬಿಸಿಗೆ ಬೇಯುತ್ತಿಗುವಾಗ ಎಲ್ಲಾದರೂ ನೀರಿನ ಹೊಂಡ ಕಂಡು ಬಂದರೆ ಅದಕ್ಕೆ ಇಳಿದು ಸ್ನಾನ ಮಾಡುವುದಕ್ಕೆ ಆಗ್ರಹ ಉಂಟಾಗದವರು ಇರಲಿಕ್ಕಿಲ್ಲ. ಪಯಸ್ವಿನಿ ಹೊಳೆ ಈ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ನೋಡುವಾಗ ಶಾಂತವಾಗಿದ್ದರೂ ಬೇಸಿಗೆ ಕಾಲದಲ್ಲಿ ನದಿಗಳ ಗಯಗಳಲ್ಲಿ ದುರಂತ ಅಡಗಿ ಕುಳಿತಿದೆ. ಇತ್ತೀಚೆಗೆ ಈ ರೀತಿಯಲ್ಲಿ ದುರಂತ ಸಂಭವಿಸಿರುವುದಕ್ಕೆ ಕೊನೆಯ ಉದಾಹರಣೆ ಮಞಂಪಾರ ಪಡ್ಯತ್ತಡ್ಕ ಎರಿಕ್ಕಳದ ಅಬ್ದುಲ್ ಇಲ್ಯಾಸ್ ಎಂಬ ೩೧ರ ಹರೆಯದ ಯುವಕನಾಗಿದ್ದಾರೆ. ಮೇಪುಂಗಾಳ್ ಗಯಾದಲ್ಲಿ ಸ್ನಾನ ಮಾಡಲು ಇಳಿದಾಗ ದುರಂತ ಸಂಭವಿಸಿದೆ. ಸಹೋದರ ಇತ್ತೀಚೆಗೆ ಖರೀದಿಸಿದ ಮನೆಯಲ್ಲಿ ವಾಸಕ್ಕೆ ತಲುಪಿದ ಇಲ್ಯಾಸ್ ಅಲ್ಲಿಂದ ಸ್ನಾನಕ್ಕೆಂದು ಹೊಳೆಗೆ ತೆರಳಿದ್ದರು. ಇವರು ಸ್ನಾನ ಮಾಡಿದ ಗಯಾ ಸುಮಾರು ೨೫ ಅಡಿಗಿಂತಲೂ ಹೆಚ್ಚು ಆಳವಿತ್ತೆಂದು ಅಗ್ನಿಶಾಮಕ ದಳದ ಅಧಿಕಾರಿಗಳು ನುಡಿಯುತ್ತಾರೆ.
ಗಯಾದ ಬಗ್ಗೆ ತಿಳಿಯದೆ ಸ್ನಾನ ಮಾಡಲು ಇಳಿದಾಗ ಅಪಾಯ ಸಂಭವಿಸುತ್ತಿರುವುದು ಸಾಮಾನ್ಯವಾಗುತ್ತಿದ್ದು, ಕಳೆದ ಬೇಸಿಗೆಯಲ್ಲಿ ದೇಲಂಪಾಡಿಯಲ್ಲಿ ಇಬ್ಬರು ಮಕ್ಕಳು ಇದೇ ರೀತಿ ಮೃತಪಟ್ಟಿದ್ದರು. ಕಡುಮನೆಯಲ್ಲೂ ಮೂರು ಮಂದಿ ಮುಳುಗಿ ಮೃತಪಟ್ಟಿದ್ದರು. ಪಯಸ್ವಿನಿ ಹೊಳೆ ಬರಿದಾಗಿದ್ದರೂ ಅಲ್ಲಲ್ಲಿರುವ ಹೊಂಡಗಳಲ್ಲಿ ನೀರು ತುಂಬಿ ಅದರ ಆಳ ತಿಳಿಯದೆ ಸ್ನಾನಕ್ಕಿಳಿದು ಅಪಾಯ ಉಂಟಾಗುತ್ತಿದ್ದು, ಜನರು ಜಾಗ್ರತೆ ವಹಿಸಬೇಕಾಗಿದೆ.