ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿ ದುರುಪಯೋಗ ಅರ್ಜಿ ವಜಾಗೊಳಿಸಿ ಲೋಕಾಯುಕ್ತ ತೀರ್ಪು: ಸರಕಾರ ನಿರಾಳ

ತಿರುವನಂತಪುರ: ಮುಖ್ಯಮಂತ್ರಿಯವರ ವಿಪತ್ತು ಪರಿಹಾರ ನಿಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿ ರುವ ಅರ್ಜಿಯನ್ನು ಲೋಕಾಯುಕ್ತದ ಪೂರ್ಣ ಪೀಠ ವಜಾಗೈದಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ೧೮ ಸಚಿವರುಗಳನ್ನು ಪ್ರತಿವಾದಿಗಳನ್ನಾಗಿಸಿ ಆರ್.ಎಸ್. ಶಶಿ ಕುಮಾರ್ ಎಂಬವರು ಸಲ್ಲಿಸಿದ ಅರ್ಜಿಯನ್ನು ಲೋಕಾಯುಕ್ತ ವಜಾಗೊಳಿಸಿ ತೀರ್ಪು ನೀಡಿದ್ದು, ಅದು ರಾಜ್ಯ ಸರಕಾರವನ್ನು ನೀರಾಳಗೊಳಿಸಿದೆ.

ಮುಖ್ಯಮಂತ್ರಿಯವರ ವಿಪತ್ತು ಪರಿಹಾರ ನಿಧಿ ವಿತರಣೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ, ಆ ನಿಧಿಯನ್ನು ಹೇಗೆ ವ್ಯಯಿಸಬೇಕೆಂದು ತೀರ್ಮಾನಿಸುವ ಅಧಿಕಾರ ಸರಕಾರಕ್ಕಿದೆ ಎಂದೂ ಲೋಕಾಯುಕ್ತ ಸ್ಪಷ್ಟಪಡಿಸಿದೆ.

ಈ ಪ್ರಕರಣದ ಮೆರಿಟನ್ನು ಲೋಕಾಯುಕ್ತ ಪರಿಶೀಲಿಸಿಲ್ಲ, ಸಚಿವ ಸಂಪುಟ ಕೈಗೊಂಡ ತೀರ್ಮಾನವನ್ನು ಮಾತ್ರವೇ ನಾವು ಪರಿಶೀಲಿಸಿದ್ದೇವೆ. ಈ ನಿಧಿಯಿಂದ ಹಣ ಬಿಡುಗಡೆಗೊಳಿಸಿದ ಸರಕಾರದ ಕ್ರಮದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಾಗಲೀ ರಾಜಕೀಯ ಹಿತಾಸಕ್ತಿಯಾಗಲಿ ನಡೆದಿಲ್ಲ. ಸಚಿವ ಸಂಪುಟದ ಒಂದು ಸಾಂವಿಧಾನಿಕ ವ್ಯವಸ್ಥೆಯಾಗಿರುವ ಹಿನ್ನೆಲೆಯಲ್ಲಿ ಅದು ಲೋಕಾಯುಕ್ತದ ಕಾನೂನು ವ್ಯಾಪ್ತಿಗೆ ಒಳಪಡುವುದಿಲ್ಲ ಎಂದೂ ಲೋಕಾಯುಕ್ತ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ದಿವಂಗತ ಎನ್‌ಸಿಪಿ ನೇತಾರ ಉಳವೂರು ವಿಜಯನ್‌ರ ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿ ವಿಪತ್ತು ನಿಧಿಯಿಂದ ೨೫ ಲಕ್ಷ ರೂ. ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ದಿ| ಕೋಡಿಯೇರಿ ಬಾಲಕೃಷ್ಣನ್‌ರ ವಾಹನಕ್ಕೆ ಬೆಂಗಾವಲು ಆಗಿ ಬರುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಪ್ರವೀಣ್ ಕುಮಾರ್ ಎಂಬವರ ಕುಟುಂಬಕ್ಕೆ ೨೦ ಲಕ್ಷ ರೂ. ಹಾಗೂ ಮಾಜಿ ಶಾಸಕ ಕೆ.ಕೆ. ರಾಮಚಂದ್ರನ್ ನಾಯರ್‌ರ ಕುಟುಂಬಕ್ಕೆ ಪರಿಹಾರ ನಿಧಿಯಿಂದ ೮.೬೬ ಲಕ್ಷ ರೂ. ಮಂಜೂರು ಮಾಡಲಾಗಿತ್ತು. ಮಾತ್ರವಲ್ಲದೆ ಅವರ ಪುತ್ರನಿಗೆ ಸರಕಾರಿ ಕೆಲಸವನ್ನು ಸರಕಾರ ನೀಡಿತ್ತು. ಇಂತಹ ಕ್ರಮವನ್ನು ಪ್ರಶ್ನಿಸಿ ಆರ್.ಎಸ್. ಶಶಿ ಕುಮಾರ್ ಐದು ವರ್ಷದ ಹಿಂದೆ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಲೋಕಾಯುಕ್ತ ಪೂರ್ಣ ಪೀಠ ಕೊನೆಗೆ ಅರ್ಜಿಯನ್ನು ವಜಾಗೈದು ತೀರ್ಪು ನೀಡಿದೆ.

RELATED NEWS

You cannot copy contents of this page