ರಾಷ್ಟ್ರೀಯ ಹೆದ್ದಾರಿ: ದ್ವಿಚಕ್ರ ವಾಹನ ಪ್ರಯಾಣಿಕರಿಗೆ ಬೆದರಿಕೆಯಾದ ಸರ್ವೀಸ್ ರಸ್ತೆಯ ಚರಂಡಿ ಸ್ಲ್ಯಾಬ್

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಯ ತಲಪಾಡಿ-ಚೆಂಗಳ ರೀಚ್‌ನಲ್ಲಿ ಸರ್ವೀಸ್ ರಸ್ತೆಗೆ ಹೊಂದಿಕೊಂಡು  ನಿರ್ಮಿಸಿದ ಚರಂಡಿ ಸ್ಲ್ಯಾಬ್‌ಗಳು ದ್ವಿಚಕ್ರ ವಾಹನ ಪ್ರಯಾಣಿಕರಿಗೆ ಬೆದರಿಕೆಯಾಗಿ ಪರಿಣಮಿಸಿದೆ.

ಚರಂಡಿಯ ಸ್ಲ್ಯಾಬ್ ಹಾಗೂ ಡಾಮರು ರಸ್ತೆಯನ್ನು ಸೇರಿಸಿ ಸರ್ವೀಸ್ ರಸ್ತೆಯಾಗಿ ಬಳಸಲಾಗುತ್ತಿದೆ. ಹಿಂಬದಿಯಿಂದ ಅಥವಾ ಮುಂಭಾಗದಿಂದ ವಾಹನಗಳು ಬಂದಾಗ ಡಾಮರು ರಸ್ತೆಯಿಂದ ದ್ವಿಚಕ್ರ ವಾಹನಗಳು ಚರಂಡಿಯ ಸ್ಲ್ಯಾಬ್‌ನ ಮೇಲೆ ಹತ್ತಲು ಯತ್ನಿಸುತ್ತಿದ್ದು, ಈ ವೇಳೆ ಅವು ಸ್ಲ್ಯಾಬ್‌ನ ಬದಿಗೆ ಬಡಿದು ಮಗುಚಿ ಬೀಳುತ್ತಿವೆ. ಕೆಲವೆಡೆ ಚರಂಡಿಯ ಸ್ಲ್ಯಾಬ್‌ಗಳು ರಸ್ತೆಗಿಂತ ಎರಡರಿಂದ   ನಾಲ್ಕು ಇಂಚು ವರೆಗೆ  ಎತ್ತರದ ಲ್ಲಿವೆ. ಇದುವೇ ಅಪಘಾತಗಳಿಗೆ ಕಾರಣವಾಗುತ್ತಿದೆ.  ಸರ್ವೀಸ್ ರಸ್ತೆ ನಿರ್ಮಾಣಗೊಂಡ ಬಳಿಕ ಹಲವು ಅಪಘಾತಗಳು ಸಂಭವಿಸಿದೆ. ಇತ್ತೀಚೆಗೆ ಕುಂಬಳೆ ದೇವಿನಗರದಲ್ಲಿ ಬೈಕ್ ಮಗುಚಿಬಿದ್ದು ಪಾಲಿಟೆಕ್ನಿಕ್  ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದನು. ನಿನ್ನೆ ಮೊಗ್ರಾಲ್‌ನಲ್ಲಿ ಸ್ಕೂಟರ್ ಮಗುಚಿ ಬಿದ್ದಿದ್ದು, ಈ ವೇಳೆ ರಸ್ತೆಗೆ ಬಿದ್ದ ಸವಾರನ ಮೇಲೆ ಲಾರಿ ಹರಿದು ಮೃತಪಟ್ಟ ಘಟನೆ ನಡೆದಿದೆ.

 ಸರ್ವೀಸ್ ರಸ್ತೆಯಲ್ಲಿ ಅವ್ಯವಸ್ಥೆಗೆ ಪರಿಹಾರ ಕಾಣಬೇಕೆಂದು ಹಲವು ಬಾರಿ ಅಧಿಕಾರಿಗಳಲ್ಲಿ ಒತ್ತಾಯಿಸಿ ದರೂ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟು ವೆಲ್ಫೇರ್ ಪಾರ್ಟಿ ಮಂಜೇಶ್ವರ ಮಂಡಲ ನೇತಾರರು  ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ನಿರ್ಮಾಣದ ಕಂಪೆನಿಗೆ ದೂರು ನೀಡಿದ್ದಾರೆ.

You cannot copy contents of this page