ಅಕ್ಷತಾರಾಜ್ ಪೆರ್ಲರ ಅವಲಕ್ಕಿ ಪವಲಕ್ಕಿ ಕೃತಿಗೆ ದತ್ತಿ ಪುರಸ್ಕಾರ
ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪುರಸ್ಕಾರ ಪ್ರಕಟವಾಗಿದ್ದು, ಕಾಸರಗೋಡು ಜಿಲ್ಲೆಯ ಲೇಖಕರಿಗೆ ಮೀಸಲಾದ ಡಾ.ರಮಾನಂದ ಬನಾರಿ ಮತ್ತು ಶಾಂತಾಕುಮಾರಿ ದತ್ತಿನಿಧಿಗೆ ಲೇಖಕಿ ಅಕ್ಷತಾ ರಾಜ್ ಪೆರ್ಲರ ಅವಲಕ್ಕಿ ಪವಲಕ್ಕಿ ಅಂಕಣ ಬರೆಹಗಳ ಸಂಕಲನ ಆಯ್ಕೆಯಾಗಿದೆ. ಕೃತಿಯ ಹಸ್ತಪ್ರತಿಯು ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಚಂದ್ರಭಾಗೀ ರೈ ದತ್ತಿನಿಧಿಗೂ ಭಾಜನವಾಗಿತ್ತು. ಅವಲಕ್ಕಿ ಪವಲಕ್ಕಿ ಕಾರವಲ್‌ನಲ್ಲಿ ಪ್ರಕಟವಾದ ದಿನಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರೆಹಗಳ ಒಟ್ಟು ಸಂಕಲನವಾಗಿದ್ದು ಮಂಗಳೂರಿನ ಸಾಹಿತ್ಯಾ ಪ್ರಕಾಶನ ಕೃತಿಯನ್ನು ಪ್ರಕಟಿಸಿದೆ. ಅಕ್ಷತಾ ರಾಜ್ ಪೆರ್ಲರು ತುಳು, ಕನ್ನಡ, ಹವ್ಯಕ ಭಾಷೆಯ ಲೇಖಕಿಯಾಗಿದ್ದು ಕತೆ, ಕವಿತೆ, ನಾಟಕ, ಅಂಕಣ ಬರೆಹ ಸಂಕಲನ ಸೇರಿದಂತೆ ಒಟ್ಟು 12 ಕೃತಿಗಳು ಪ್ರಕಟವಾಗಿದೆ. ಇವರ ಕೃತಿಗಳಿಗೆ ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಪ್ರಶಸ್ತಿ, ಕೊಡಗಿನ ಗೌರಮ್ಮ ದತ್ತಿನಿಧಿ, ಚಂದ್ರಭಾಗೀ ರೈ ದತ್ತಿನಿಧಿ, ನಿರುಪಮಾ ದತ್ತಿನಿಧಿ, ವಾಣಿ ಕತಾ ಪುರಸ್ಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಹೀಗೆ ಹಲವು ಪುರಸ್ಕಾರಗಳು ಸಂದಿವೆ. ಮೈಸೂರು ದಸರಾ ಕವಿಗೋಷ್ಠಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ ಗಳಿಗೆ ಆಯ್ಕೆಯಾಗಿರುತ್ತಾರೆ.