ಕಾಸರಗೋಡು: ಅಧಿಕಾರಿಗಳ ಅನಾಸ್ಥೆಯಿಂದಾಗಿ ಕುಟುಂಬವೊಂದು ಅದೃಷ್ಟವಶಾತ್ ದುರಂತದಿಂದ ಪಾರಾಗಿದೆ.
ಚಂದ್ರಗಿರಿ ನಡಕ್ಕಾಲ್ ಎಂಬಲ್ಲಿ ಮನೆಯೊಂದರ ಹಿಂಬದಿಗೆ ಬೃಹತ್ ಬಂಡೆಕಲ್ಲು ಉರುಳಿ ಬಂದು ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಬಂಡೆಕಲ್ಲು ಉರುಳಿ ಬೀಳಲು ಸಾಧ್ಯತೆ ಇದೆಯೆಂದು ತಿಳಿಸಿ ಮನೆಯವರು ಕಳನಾಡು ವಿಲ್ಲೇಜ್ ಆಫೀಸರ್ಗೆ ಈ ಹಿಂದೆಯೇ ದೂರು ನೀಡಿದ್ದರು. ಅವರು ಬಂದು ನೋಡಿ ಹೋಗಿ ಅದರಿಂದ ಅಪಾಯವುಂಟಾಗದೆಂದು ತಿಳಿಸಿರುವು ದಾಗಿ ಮನೆಯಲ್ಲಿ ವಾಸಿಸುತ್ತಿರುವ ಮಿಥೇಶ್ ತಿಳಿಸಿದ್ದಾರೆ. ಗಾಳಿ ಮಳೆಗೆ ಬಂಡೆಕಲ್ಲು ಉರುಳಿ ಅಪಾಯ ಸಂಭವಿಸಬಹು ದೆಂದು ಮನೆಯವರು ಭೀತಿಯಲ್ಲಿ ದಿನಕಳೆಯುತ್ತಿರುವು ದಾಗಿಯೂ ವಿಲ್ಲೇಜ್ ಆಫೀಸರ್ಗೆ ನೀಡಿದ ಮನವಿಯಲ್ಲಿ ಅವರು ತಿಳಿಸಿದ್ದರು. ಮಿಥೇಶ್ರ ಪತ್ನಿ ಚೈತ್ರ ಸಿ.ಎಚ್ ಈ ಮನವಿ ನೀಡಿದ್ದರು. ಹಬೀಬ್ ಎಂಬವರ ಸ್ಥಳದಲ್ಲಿದ್ದ ಬಂಡೆಕಲ್ಲು ಈಗ ಉರುಳಿ ಬಂದು ಮನೆಯ ಗೋಡೆಗೆ ಹಾನಿಯಾಗಿದೆ.
ಈ ಮೊದಲು ಇಲ್ಲಿ ಗಾಳಿ ಮಳೆಗೆ ಮರಗಳು ಮುರಿದು ಬಿದ್ದ ಘಟನೆಯೂ ನಡೆದಿತ್ತು. ಇದೆಲ್ಲವನ್ನು ತಿಳಿಸಿ ಮನವಿ ನೀಡಿ ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಮಿಥೇಶ್ರ ಕುಟುಂಬ ಆಗ್ರಹಿಸಿದೆ. ಆದರೆ ಅವರು ಬಂದು ನೋಡಿ ಹೋದದ್ದಲ್ಲದೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಮಧ್ಯೆ ನಿನ್ನೆ ರಾತ್ರಿ ಬಂಡೆಕಲ್ಲು ಉರುಳಿ ಬಿದ್ದಿದೆ. ಈಗ ಪಂಚಾಯತ್ನ ವಾರ್ಡ್ ಪ್ರತಿನಿಧಿ ಸ್ಥಳಕ್ಕೆ ತಲುಪಿ ನೋಡಿ ಹೋಗಿದ್ದು, ವಿಲ್ಲೇಜ್ ಆಫೀಸರ್ ಸ್ಥಳಕ್ಕೆ ಬರುವರೆಂದು ಮಿಥೇಶ್ ತಿಳಿಸಿದ್ದಾರೆ.