ಅರಣ್ಯದ ಕೆರೆಯಿಂದ ಕೊಳವೆ ಮೂಲಕ ತೋಟಕ್ಕೆ ನೀರು ಪೂರೈಸುತ್ತಿದ್ದ ಇಬ್ಬರ ಸೆರೆ
ಕಾಸರಗೋಡು: ಅರಣ್ಯದ ಕೆರೆಯಿಂದ ಅನಧಿಕೃತವಾಗಿ ಕೊಳವೆ ಮೂಲಕ ಅಡಿಕೆ ತೋಟಕ್ಕೆ ನೀರು ಪೂರೈಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಅಡಿಕೆ ತೋಟದ ಮ್ಯಾನೇಜರ್ ಆಗಿರುವ ಕೊನ್ನಕ್ಕಾಡ್‌ನ ಥೋಮಸ್ (59) ಮತ್ತು ಎಡಕಾನದ ಬಿನೊ (46) ಎಂಬವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಹೊಸದುರ್ಗ ಅರಣ್ಯ ರೇಂಜ್‌ನ ಮರುದೋಂ ಸೆಕ್ಷನ್‌ನ ವ್ಯಾಪ್ತಿಗೊಳಪಟ್ಟ ಸರಕಾರಿ ಅರಣ್ಯಕ್ಕೆ ಅನಧಿಕೃತವಾಗಿ ನುಗ್ಗಿ ಅಲ್ಲಿನ ಕೆರೆಗೆ ಕೊಳವೆ ಅಳವಡಿಸಿ ಅಡಿಕೆ ತೋಟಕ್ಕೆ ನೀರು ಪೂರೈಸುತ್ತಿದ್ದ ದೂರಿನಂತೆ ಈ ಇಬ್ಬರ ವಿರುದ್ಧ ಕೇಸು ದಾಖಲಿಸ ಲಾಗಿದೆ. ಅಡಿಕೆ ತೋಟದಲ್ಲಿ ಮೂರು ಟ್ಯಾಂಕ್ ಗಳನ್ನು ಸ್ಥಾಪಿಸಿ ಅದರಿಂದ ಅಲ್ಲೇ ಪಕ್ಕದ ಅಡಿಕೆ ತೋಟಕ್ಕೆ ನೀರು ಪೂರೈಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ನಾವು ಅರಣ್ಯದ ಕೆರೆಯಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳನ್ನು ನಡೆಸಿಲ್ಲ. ಕೇವಲ ನೀರು ಮಾತ್ರವೇ ತೆಗೆದಿದ್ದೆವು ಎಂಬುದು ಬಂಧಿತರ ವಾದವಾಗಿದೆ. ಅರಣ್ಯದ ಕೆರೆಯಿಂದ ನೀರು ತೆಗೆಯುತ್ತಿರುವುದಕ್ಕೆ ಸಂಬಂಧಿಸಿ ಅದರ ಪರಿಸರವಾಸಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಅರಣ್ಯ ಇಲಾಖೆಯ ಗುಪ್ತಚರ ವಿಭಾಗ ತನಿಖೆ ನಡೆಸಿ, ಅದರ ಆಧಾರದಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.