ಅಶ್ವಿನಿ ಕುಮಾರ್ ಕೊಲೆ ಕೇಸು: ಆರೋಪಿ ಮಶ್ರೂಕ್‌ಗೆ ಜೀವಾವಧಿ ಶಿಕ್ಷೆ
ಕಣ್ಣೂರು: ಆರ್‌ಎಸ್‌ಎಸ್ ಕಣ್ಣೂರು ಜಿಲ್ಲಾ ಬೌದ್ಧಿಕ್ ಶಿಕ್ಷಣ್ ಪ್ರಮುಖ್ ಪುನ್ನಾಡ್ ಅಶ್ವಿನಿ ಕುಮಾರ್‌ರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಚಾವಶ್ಶೇರಿ ನಿವಾಸಿ ಮಶ್ರೂಕ್‌ಗೆ ಜೀವನ ಪರ್ಯಂತ ಕಾರಾಗೃಹ, 50,000 ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. ತಲಶ್ಶೇರಿ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ಪ್ರಕರಣದಲ್ಲಿ 13 ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದ್ದು, ಎನ್‌ಡಿಎಫ್ ಕಾರ್ಯಕರ್ತರಾದ 14 ಮಂದಿ ಆರೋಪಿಗಳಾಗಿದ್ದರು. ಇದರಲ್ಲಿ ಮಶ್ರೂಕ್ ಮಾತ್ರ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರ ವಿರುದ್ಧ ಅಪೀಲು ಸಲ್ಲಿಸಲಾಗುವುದೆಂದು ಪ್ರೋಸಿಕ್ಯೂಷನ್ ತಿಳಿಸಿದೆ.
2005 ಮಾರ್ಚ್ 10ರಂದು ಅಶ್ವಿನಿ ಕುಮಾರ್‌ರನ್ನು ಕೊಲೆಗೈಯ್ಯಲಾಗಿತ್ತು. ಪೇರಾವೂರಿಗೆ ತೆರಳುತ್ತಿರುವಾಗ ಇರಿಟ್ಟಿಯಲ್ಲಿ ಬಸ್‌ನೊಳಗೆ ಬಹಿರಂಗವಾಗಿ ಇರಿದು ಕೊಲೆಗೈದ ಘಟನೆ ಅಂದು ಕೋಲಾಹಲಕ್ಕೆ ಕಾರಣವಾಗಿತ್ತು. ಆರೋಪಿಗಳಲ್ಲಿ ನಾಲ್ಕು ಮಂದಿ ಬಸ್ಸಿನಲ್ಲೇ ಇದ್ದರು. ಉಳಿದವರು ಜೀಪಿನಲ್ಲಿ ತಲುಪಿ ಕತ್ತಿಯಿಂದ ಇರಿದು ಕಡಿದು ಕೊಲೆಗೈದ ಬಗ್ಗೆ ದೂರಲಾಗಿತ್ತು.