ಅಸೌಖ್ಯದಿಂದ ಪ್ಲಸ್‌ವನ್ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ: ಕೇಸು ದಾಖಲು
ಕಾಸರಗೋಡು: ಅವಯವ ಬದಲಿಸುವ ಶಸ್ತ್ರಕ್ರಿಯೆಗೊಳಗಾಗಿ ಚಿಕಿತ್ಸೆಯಲ್ಲಿದ್ದ ಪೊಯಿನಾಚಿ ಮೈಲಾಟಿ ರಮೀಸಾ ವಿಲ್ಲಾದ ಹುಸೈನ್ ಕೊಳತ್ತೂರು-ಕೆ.ಎ. ಫಾತಿಮ್ಮತ್ ರಸೀನಾ ದಂಪತಿ ಪುತ್ರಿ ಹಾಗೂ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿನಿ ಎಚ್. ರಮೀಸ ತಸ್ಲೀಮ್ (19)ಳ ಸಾವಿಗೆ ಸಂಬಂಧಿಸಿ ಆಕೆಗೆ ಚಿಕಿತ್ಸೆ ನೀಡಿದ ಕಲ್ಲಿಕೋಟೆಯ ಖ್ಯಾತ ಆಸ್ಪತ್ರೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತಳ ತಂದೆ ಈ ಬಗ್ಗೆ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.ರಮೀಸಾ ತಸ್ಲೀಮ್‌ಳನ್ನು ಐದು ತಿಂಗಳ ಹಿಂದೆ ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಕೆಯ ಅವಯವ ಬದಲಿಸಬೇಕೆಂಬ ಆಸ್ಪತ್ರೆ ಅಧಿಕೃತರ ಮಾಹಿತಿ ಪ್ರಕಾರ ಅದಕ್ಕಾಗಿ 60 ಲಕ್ಷ ರೂ. ವ್ಯಯಿಸಲಾಗಿತ್ತು. ಇಷ್ಟೆಲ್ಲಾ ಆದರೂ ತನ್ನ ಪುತ್ರಿಯ ಪ್ರಾಣ ರಕ್ಷಿಸಲು ಸಾಧ್ಯವಾಗಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಮೀಸಾ ತಸ್ಲೀಮ್‌ಳ ತಂದೆ ತಿಳಿಸಿದ್ದಾರೆ. ಈಕೆ ಮೊನ್ನೆ ಸಂಜೆ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಳು.