ಆಂಬುಲೆನ್ಸ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬೆಂಕಿ: ರೋಗಿ ಸಜೀವ ದಹನ

ಕಲ್ಲಿಕೋಟೆ: ಅಪರಿಮಿತ ವೇಗದಲ್ಲಿ ಸಂಚರಿಸಿದ ಆಂಬುಲೆನ್ಸ್ ವಿದ್ಯುತ್ ಕಂಬಕ್ಕೆ ಬಡಿದು ಬೆಂಕಿಗಾಹುತಿಯಾಗಿ ಅದರಲ್ಲಿದ್ದ ರೋಗಿ ಸಜೀವದಹನಗೊಂಡ ದಾರುಣ ಘಟನೆ ಕಲ್ಲಿಕೋಟೆ ಸಮೀಪ ಸಂಭವಿಸಿದೆ.

ಇಂದು ಮುಂಜಾನೆ 3.30ರ ವೇಳೆ ಘಟನೆ  ನಡೆದಿದೆ. ನಾದಾಪುರಂ ನಿವಾಸಿ ಸುಲೋಚನ (57) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಸುಲೋಚನಾರನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ಸಮೀಪದಲ್ಲಿ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ತಕ್ಷಣ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ. ಢಿಕ್ಕಿಯ ಆಘಾತದಿಂದ ಆಂಬುಲೆನ್ಸ್ ನಲ್ಲಿದ್ದವರು ಹೊರಕ್ಕೆಸೆಯಲ್ಪಟ್ಟರು. ಆದರೆ ಆಂಬುಲೆನ್ಸ್‌ನಲ್ಲಿ ರೋಗಿಯನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಆಂಬುಲೆನ್ಸ್  ಪೂರ್ಣವಾಗಿ ಉರಿದು ನಾಶಗೊಂಡಿದೆ. ಮಲಬಾರ್ ಮೆಡಿಕಲ್ ಕಾಲೇಜಿನ ಆಂಬುಲೆನ್ಸ್ ಅಪಘಾತಕ್ಕೀಡಾಗಿದೆ.

You cannot copy contents of this page