ಆರಿಕ್ಕಾಡಿ ಕೋಟೆಯೊಳಗೆ ನಿಧಿ ಶೋಧ: ಆರೋಪಿಗಳ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಬೇಕು- ಎಂ.ಎಲ್. ಅಶ್ವಿನಿ

ಕಾಸರಗೋಡು: ಅತೀ ಪುರಾತನವಾದ ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರಸಮೀಪದ ಆರಿಕ್ಕಾಡಿ ಕೋಟೆಯೊಳಗಿನ ಬಾವಿಯಲ್ಲಿ ನಿಧಿ ಶೋಧ ನಡೆಸಿದ  ಮುಸ್ಲಿಂ ಲೀಗ್ ನೇತಾರನೂ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಜೀ ಬ್ ರಹ್ಮಾನ್ ಯಾನೆ ಮುಜೀಬ್ ಕಂಬಾರ್ ಹಾಗೂ ತಂಡದ ವಿರುದ್ಧ  ಜಾಮೀನು ರಹಿತ ಕಾಯ್ದೆ ಪ್ರಕಾರ ಕೇಸು ದಾಖಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ. ಕ್ಷೇತ್ರ ಸಮೀಪದ ಕೋಟೆಯೊಳಗೆ ನಿಧಿ ಶೋಧ ನಡೆಸಿದ ಆರೋಪಿಗಳು ಕೋಮುಭಾವನೆ ಕೆರಳಿಸಲು ಯತ್ನಿಸಿದ್ದಾರೆ. ಜಿಲ್ಲೆಯ ಕ್ಷೇತ್ರಗಳಲ್ಲಿ ನಡೆದ ಕಳವುಗಳಲ್ಲಿ ಈ ಆರೋಪಿಗಳು  ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸಬೇಕು. ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಕಾಣಿಕೆ ಹುಂಡಿ ಕೆಡವಿ ಹಣ ಕಳವು ಸಹಿತ ಹಲವು ಕ್ಷೇತ್ರ ಕಳವು  ಪ್ರಕರಣಗಳ ತನಿಖೆ ಗುರಿ ತಲುಪಿಲ್ಲ. ಕ್ಷೇತ್ರಗಳ ಸುರಕ್ಷತೆ ಕಾಪಾಡುವಲ್ಲಿ ರಾಜ್ಯ ಆಡಳಿತ ಹಾಗೂ ಪೊಲೀಸ್ ಪೂರ್ಣ ಪರಾಭವಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಪಂಚಾಯತ್ ಉಪಾಧ್ಯಕ್ಷ ಸ್ಥಾನದಿಂದ ಮುಜೀಬ್ ರಹ್ಮಾನ್‌ನನ್ನು ಕೂಡಲೇ ಹೊರಹಾಕಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಚಳವಳಿಗೆ ಬಿಜೆಪಿ ನೇತೃತ್ವ ನೀಡಲಿದೆಯೆಂದೂ ಎಂ.ಎಲ್. ಅಶ್ವಿನಿ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

You cannot copy contents of this page